ಬೆಂಗಳೂರು: ಬಿಜೆಪಿ ಜೊತರ ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಕೆಆರ್ಪಿ) ವಿಲೀನ ವಿಚಾರ ಇದೀಗ ವಿವಾದದ ಸ್ವರೂಪ ತಾಳಿದೆ. ಈ ವಿಚಾರದಲ್ಲಿ ನಿಯಮ ಉಲ್ಲಂಘಿಸಿರುವ ಆರೋಪಕ್ಕೆ ಕೆಕೆಆರ್ಪಿ ಶಾಸಕ ಜನಾರ್ದನ ರೆಡ್ಡಿ ಗುರಿಯಾಗಿದ್ದು, ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಕೋರಿ ಮಾಜಿ ಶಾಸಕ ರಮೇಶ್ ಬಾಬು ಸ್ಪೀಕರ್ಗೆ ದೂರು ನೀಡಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು ಅವರು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಒಟ್ಟಾರೆ ವಿದ್ಯಮಾನಗಳ ಬಗ್ಗೆ ಮಾಹಿತಿ ಒದಗಿಸಿದರು. ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕರು ಹಾಗೂ ಅಕ್ರಮ ಗಣಿ ಖ್ಯಾತಿಯ ಜನಾರ್ಧನ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದು, ರಾಷ್ಟ್ಪ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಪಕ್ಷ ಎಲ್ಲಾ ಕಳಂಕಿತರು, ಭ್ರಷ್ಟಾಚಾರ ಆರೋಪ ಹೊತ್ತಿರುವವರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಅವರನ್ನು ವಾಶಿಂಗ್ ಮಷಿನ್ ರೀತಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿ ಹೇಗೆ ಇತರೆ ಪಕ್ಷಗಳ ನಾಯಕರನ್ನು ಹೇಗೆ ಖರೀದಿ ಮಾಡುತ್ತಿದೆ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಬೆದರಿಕೆ ಹಾಕಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಮೋದಿ ಅವರು ತಾನು ತಿನ್ನಲ್ಲ ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಗಳನ್ನು ಬಹಿರಂಗಗೊಳಿಸುವ ಮೂಲಕ ಬಿಜೆಪಿಯ ಮುಖವಾಡ ಕಳಚಿದೆ. ಆಮೂಲಕ ಬಿಜೆಪಿ ಬೆತ್ತಲಾಗಿದೆ. ಬಿಜೆಪಿ ಇನ್ನು ಮುಂದೆ ಬಾಂಡ್ ಜನತಾ ಪಕ್ಷವಾಗಿ ಹೊರಹೊಮ್ಮಿದೆ ಎಂದು ವ್ಯಂಗ್ಯವಾಡಿದರು.
ಈ ಬಾಂಡ್ ಮೂಲಕ ಬಿಜೆಪಿ 12 ಸಾವಿರ ಕೋಟಿ ಸಂಗ್ರಹಿಸಿದೆ. ಈ ವಿಚಾರದಲ್ಲಿ ನಾವು ಸುಪ್ರೀಂ ಕೋರ್ಟ್ ಗೆ ಧನ್ಯವಾದ ತಿಳಿಸುತ್ತೇವೆ. ಕೇವಲ ಚುನಾವಣಾ ಬಾಂಡ್ ವಿಚಾರ ಮಾತ್ರವಲ್ಲ, ಛಂಡೀಗಡದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಹೇಗೆ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಫಲಿತಾಂಶ ಬದಲಾಯಿಸಿತ್ತು. ಅದನ್ನು ನ್ಯಾಯಾಲಯ ತಡೆದಿತ್ತು ಎಂದು ಗಮನಸೆಳೆದರು.
ಜನಾರ್ದನ ರೆಡ್ಡಿ ಅವರು 1999ರಲ್ಲಿ ಸುಷ್ಮಾ ಸ್ವರಾಜ್ ಅವರ ಮೂಲಕ ಬಿಜೆಪಿ ಸೇರ್ಪಡೆಯಾಗಿ ನಂತರ ಅನೇಕ ಅಕ್ರಮ ಎಸಗಿದ್ದರು. ಲೋಕಾಯುಕ್ತ ವರದಿ ಮೇರೆಗೆ ಅವರು ಜೈಲು ಸೇರಿದ್ದರು. 2011ರಲ್ಲಿ ಸಿಸಿಬಿ ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಇದಕ್ಕಿಂತ ಪ್ರಮುಖವಾಗಿ ಸುಪ್ರೀಂ ಕೋರ್ಟ್ ಇವರಿಗೆ ಬಳ್ಳಾರಿ ಪ್ರವೇಶಿಸದಂತೆ ನಿರ್ದೇಶನ ನೀಡಿತ್ತು. ಇಂತಹ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಅವರು 25ರಂದು ಬಿಜೆಪಿ ಸೇರಿ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿರುವುದಾಗಿ ಹೇಳಿದ್ದಾರೆ ಎಂದ ರಮೇಶ್ ಬಾಬು, ಒಂದು ಪಕ್ಷ ಮತ್ತೊಂದು ಪಕ್ಷದ ಜತೆ ವಿಲೀನವಾಗಲು ಅದರದೇ ಆದ ಪ್ರಕ್ರಿಯೆಗಳಿವೆ. ಚುನಾವಣಾ ಆಯೋಗಕ್ಕೆ ಕೊಟ್ಟಿರುವ ಮಾಹಿತಿ ಪ್ರಕಾರ ಜನಾರ್ದನ ರೆಡ್ಡಿ ಅವರು ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಪದಾಧಿಕಾರಿಯಲ್ಲ. ಇದು ನೊಂದಾಯಿತ ರಾಜಕೀಯ ಪಕ್ಷ. ಇದರ ರಾಷ್ಟ್ರೀಯ ಅಧ್ಯಕ್ಷರು ಜೆ.ರಾಮಣ್ಣ. ಇದರಲ್ಲಿ ಅನೇಕ ಪದಾಧಿಕಾರಿಗಳಿದ್ದಾರೆ. ಆದರೆ ಇವರು ಏಕಾಏಕಿ ಬಿಜೆಪಿಗೆ ಸೇರಿ ಬೇರೆ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿರುವುದಾಗಿ ಹೇಳಿರುವುದು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗಿದೆ. ಬಿಜೆಪಿ ಪಕ್ಷ ಸೇರಿ ತಮ್ಮ ಪಕ್ಷದ ಸದಸ್ಯತ್ವ ತ್ಯಜಿಸಿರುವ ಕಾರಣ ಜನಾರ್ಧನ ರೆಡ್ಡಿ ಅವರ ಮೇಲೆ ಸ್ಪೀಕರ್ ಅವರು ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ರೆಡ್ಡಿ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ ಶೋಕಾಸ್ ನೊಟೀಸ್ ಜಾರಿ ಮಾಡಬೇಕು ಎಂದು ಸ್ಪೀಕರ್ ಅವರಿಗೆ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 30-03-2023ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಡಿಟ್ ವರದಿ ಪ್ರಕಾರ ಆ ಪಕ್ಷದಲ್ಲಿರುವ ಮೊತ್ತ 1320 ರೂ. ಮಾತ್ರ. ಗಣಿ ಖ್ಯಾತಿ ಜನಾರ್ದನ ರೆಡ್ಡಿ ಅವರು ಬೇನಾಮಿ ಹೆಸರಲ್ಲಿ ಪಕ್ಷ ಹುಟ್ಟು ಹಾಕಿ ಆಗ ಬಿಜೆಪಿ ಜತೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಈ ವಿಚಾರದಲ್ಲೂ ರೆಡ್ಡಿ ಅವರು ಬೇನಾಮಿ ವ್ಯವಹಾರ ನಡೆಸಿರುವುದು ಸ್ಪಷ್ಟವಾಗಿದೆ. ಈ ಹಿಂದೆ ಕೆಜೆಪಿ ಪಕ್ಷದ ವಿಚಾರವಾಗಿ ಯಡಿಯೂರಪ್ಪನವರು ಹೇಗೆ ಕಾನೂನು ಉಲ್ಲಂಘನೆ ಮಾಡಿದ್ದರು ಎಂದು ನಾವು ನೋಡಿದ್ದೇವೆ. ಈಗ ಜನಾರ್ದನ ರೆಡ್ಡಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಮೋದಿ ಅವರು ತಮ್ಮದ ಸ್ವಚ್ಛ ನಾಯಕತ್ವ ಎಂದು ಹೇಳುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಆಮೂಲಕ ಬಿಜೆಪಿ ಪಕ್ಷ ತಮಗೆ ತಾವೇ ಮಸಿ ಬಳಿದುಕೊಂಡಿದ್ದಾರೆ. ಈ ವಿಚಾರವಾಗಿ ಬಿಜೆಪಿ ನಾಯಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು.