ಬೆಂಗಳೂರು: ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದರ ಮೂಲಕ ಇತಿಹಾಸ ಬರೆದಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಇದೀಗ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳಿರುವುದು ಖಂಡನಾರ್ಹ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಬಿಜೆಪಿ ಸರ್ಕಾರಗಳನ್ನು ಪ್ರಶ್ನಿಸಲು ತಾಕತ್ತಿಲ್ಲದ ಛಲವಾದಿ ನಾರಾಯಣಸ್ವಾಮಿ ಇಂತಹ ಹೇಳಿಕೆಗಳ ಮೂಲಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪದೇ ಪದೇ ಮಸಿ ಬಳಿಯುತ್ತಿದ್ದಾರೆ ರಮೇಶ್ ಬಾಬು ಟೀಕಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರೂ ಆದ ರಮೇಶ್ ಬಾಬು ಮಾಧ್ಯಮ ಹೇಳಿಕೆ ಮೂಲಕ ಬಿಜೆಪಿ ನಾಯಕರ ನಿಲುವಿನ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಜಾಭತ್ವದ ವ್ಯವಸ್ಥೆಯಲ್ಲಿ ವಿಧಾನಮಂಡಲದ ವಿರೋಧ ಪಕ್ಷದ ನಾಯಕರಿಗೆ ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಕರ್ನಾಟಕ ವಿಧಾನಮಂಡಲದ ಇಬ್ಬರೂ ವಿರೋಧ ಪಕ್ಷದ ನಾಯಕರು ಅತ್ಯಂತ ವೈಫಲ್ಯದ ನಾಯಕರಾಗಿದ್ದು, ರಾಜ್ಯದ ಸಮಸ್ಯೆಗಳು ಮತ್ತು ಆಡಳಿತದ ಮೇಲೆ ಬೆಳಕು ಚೆಲ್ಲುವ ಬದಲು ಪದೇ ಪದೇ ತಮ್ಮ ವೈಫಲ್ಯಗಳನ್ನು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ರವರು 28.01.2026 ರಂದು ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದರ ಮೂಲಕ ಇತಿಹಾಸ ಬರೆದಿರುತ್ತಾರೆ. ಈಗ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ತಮ್ಮ ಬಟ್ಟೆಗೆ ತಾವೇ ಮಸಿ ಬಳಿದುಕೊಂಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಎಲ್ಲ ರೀತಿಯ ಬಳುವಳಿಗಳನ್ನು ಪಡೆದುಕೊಂಡು ಮಲ್ಲಿಕಾರ್ಜುನ ಖರ್ಗೆ ರವರ ಕುಟುಂಬವನ್ನು ಟೀಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು, ಅದಕ್ಕಾಗಿಯೇ ಬಿಜೆಪಿಯಲ್ಲಿ ಬಳುವಳಿಯನ್ನು ಪಡೆದುಕೊಂಡಿರುವ ಛಲವಾದಿ ನಾರಾಯಣಸ್ವಾಮಿ ಯವರು ಪ್ರಿಯಾಂಕಾ ಖರ್ಗೆರವರನ್ನು ಟೀಕೆ ಮಾಡುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.
ಸ್ವಾಭಿಮಾನವನ್ನು ಅಡವಿಟ್ಟು ಬಿಜೆಪಿಯಲ್ಲಿ ಬದುಕುತ್ತಿರುವ ಛಲವಾದಿಯವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಜೆಟ್ ಗೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ಮತ್ತೊಮ್ಮೆ ಚಡ್ಡಿ ಹೊರುವ ಸಂಸ್ಕೃತಿಗೆ ಮುಂದಾಗಿದ್ದಾರೆ ಎಂದು ಲೇವಡಿ ಮಾಡಿರುವ ರಮೇಶ್ ಬಾಬು, ಕೇಂದ್ರ ಬಿಜೆಪಿ ಸರ್ಕಾರವು ತನ್ನ ಒಟ್ಟಾರೆ ಬಜೆಟ್ ನಲ್ಲಿ ಶೇಕಡಾ ೧೦ ರಷ್ಟು ಹಣವನ್ನು ಈ ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಿಲ್ಲ. ದಲಿತ ವಿರೋಧಿ ನೀತಿಯನ್ನು ತನ್ನ ಆಡಳಿತದ ಉದ್ದಗಲಕ್ಕೂ ಸಾರುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನಾಗಲಿ ಅಥವಾ ಮೀಸಲಾತಿ ವಿರೋಧಿ ನೀತಿಯನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರವನ್ನಾಗಲಿ ಪ್ರಶ್ನೆ ಮಾಡುವ ತಾಕತ್ತು, ಧೈರ್ಯ ಅಥವಾ ನೈತಿಕತೆಯನ್ನು ಹೊಂದಿರದ ಛಲವಾದಿ ನಾರಾಯಣಸ್ವಾಮಿಯವರು, ಧರ್ಮದ ಹೆಸರಲ್ಲಿ ಬೆಂಕಿ ಇಡುವ ಬಿಜೆಪಿ ಪ್ರವೃತ್ತಿಯ ಮುಂದುವರೆದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ಪ್ರತಿಗೆ ಬೆಂಕಿ ಇಡುವ ಮಾತನಾಡಿದ್ದಾರೆ ಎಂದು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಡೀ ದೇಶದಲ್ಲಿ ಎಸ್.ಸಿ.ಪಿ ಮತ್ತು ಎಸ್.ಟಿ.ಪಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ ಸಿದ್ದರಾಮಯ್ಯ ಸರ್ಕಾರವನ್ನು ಅನುಕರಣೆ ಮಾಡಲು ವಿಫಲವಾಗಿರುವ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಇತರೆ ರಾಜ್ಯಗಳ ಬಿಜೆಪಿ ಸರ್ಕಾರಗಳನ್ನು ಪ್ರಶ್ನಿಸಲು ತಾಕತ್ತಿಲ್ಲದ ಛಲವಾದಿ ನಾರಾಯಣಸ್ವಾಮಿ ಇಂತಹ ಹೇಳಿಕೆಗಳ ಮೂಲಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪದೇ ಪದೇ ಮಸಿ ಬಳೆಯುತ್ತಿದ್ದಾರೆ. ಬಹುಶ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇದಕ್ಕಿಂತ ಹೆಚ್ಚು ಭಟ್ಟಂಗಿತನ ಪ್ರದರ್ಶನ ಮಾಡಲು ಇವರಿಗೆ ಸಾಧ್ಯವಿಲ್ಲ ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.
ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದು, ಸಾರ್ವಜನಿಕವಾಗಿ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದು ಇವುಗಳು ಛಲವಾದಿ ನಾರಾಯಣಸ್ವಾಮಿ ರವರು ಬಿಜೆಪಿ ಮತ್ತು ಸಂಘ ಪರಿವಾರದಿಂದ ಕಲಿತ ಸಂಸ್ಕೃತಿ ಆಗಿರುತ್ತದೆ. ಇವರಿಗೆ ದಲಿತರ ಬಗ್ಗೆ ಬದ್ದತೆ ಇದ್ದರೆ ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ನಲ್ಲಿ ದೇಶದ ದಲಿತ ಸಮುದಾಯಕ್ಕೆ ನೀಡಿರುವ ಅನುದಾನಗಳ ಕುರಿತು ಧ್ವನಿಯೆತ್ತಲಿ. ಪುಕ್ಕಟೆ ಪ್ರಚಾರಕ್ಕಾಗಿ ಚಡ್ಡಿ ಹೊರುವ, ಪುಸ್ತಕ ಹರಿಯುವ, ಬೆಂಕಿ ಇಡುವ ನಡತೆಯಿಂದ ಮುಕ್ತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ.























































