ಬೆಂಗಳೂರು: ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರಿಂದ ರಾಜೀನಾಮೆ ಕೊಡಿಸಿ ದಲಿತ ನಾಯಕರನ್ನು ಕೂರಿಸಲಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ರಮೇಶ್ ಬಾಬು, ರಾಜ್ಯದಲ್ಲಿ ವಿಜಯೇಂದ್ರ ಅವರು ರಾಜ್ಯಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಜೆ.ಪಿ.ನಡ್ಡಾ ಅವರು 14ನೇ ಅಧ್ಯಕ್ಷರು. ಈ ವಿಜಯೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದು ತಮ್ಮ ರಾಜಕೀಯ ಎಳಸುತನವನ್ನ ಪ್ರದರ್ಶನ ಮಾಡಿದ್ದಾರೆ. ಎಂದು ಟೀಕಿಸಿದರು.
ಅವರ ತಂದೆ ಯಡಿಯೂರಪ್ಪ ಅವರಿಂದ ರಾಜಕೀಯ ಕಲಿತಿದ್ದಾರೆ. ಒಳ್ಳೆ ಭವಿಷ್ಯವಿದೆ ಎಂದು ನನಗೆ ಅನಿಸಿತ್ತು. ಆದರೆ ಅವರ ಇತ್ತೀಚಿನ ಹೇಳಿಕೆಗಳನ್ನು ನೋಡುತ್ತಿದ್ದರೆ ಭೌದ್ದಿಕ ದಿವಾಳಿತನವನ್ನ ಪ್ರದರ್ಶಿಸುತ್ತಿವೆ. ಅವರ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ದೆಹಲಿ ದಂಡಯಾತ್ರೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ರಾಜಕೀಯ ನಿವೃತ್ತಿ ತೆಗೆದುಕೊಂಡ ಯಡಿಯೂರಪ್ಪ ಅವರನ್ನು ಮತ್ತೆ ಬಲವಂತವಾಗಿ ರಾಜಕೀಯಕ್ಕೆ ಎಳೆದು ತಂದಿದ್ದಾರೆ ಎಂದು ಕುಟುಕಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿಯವರು ರಾಜಕೀಯ ಷಡ್ಯಂತ್ರ ಮಾಡಿ ಮುಗಿಸಿದರು ಎನ್ನುವುದನ್ನು ಮರೆಯಬಾರದು. ಬಿಜೆಪಿಯ 45 ವರ್ಷಗಳ ಇತಿಹಾಸದಲ್ಲಿ ಕೇವಲ ಇಬ್ಬರು ಬೇರೆ ಜಾತಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅದರಲ್ಲಿ ಬಂಗಾರು ಲಕ್ಷಣ್ ಎನ್ನುವ ದಲಿತರನ್ನು ಒಂದು ವರ್ಷಕ್ಕೆ ಮಾತ್ರ ಮಾಡಲಾಯಿತು. ಅವರನ್ನು ತೆಹಲ್ಕಾ ಹಗರಣದಲ್ಲಿ ಸಿಕ್ಕಿಸಲಾಯಿತು ಅಪರಾಧ ರುಜುವಾದ ಕಾರಣಕ್ಕೆ ಜೈಲಿಗೆ ಹೋದರು ನಂತರ ಅಕಾಲಿಕ ಮರಣಕ್ಕೆ ತುತ್ತಾದರು. ಕ್ಷತ್ರಿಯ ಸಮಾಜಕ್ಕೆ ಸೇರಿದ ಠಾಕೂರ್ ಅವರನ್ನು ಎರಡು ವರ್ಷಕ್ಕೆ ಮಾತ್ರ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂದು ರಮೇಶ್ ಬಾಬು ಗಮನಸೆಳೆದರು.
ಇಂತಹ ಬಿಜೆಪಿಗೆ ಇದ್ದಕ್ಕಿದ್ದಂತೆ ದಲಿತರ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಕರ್ನಾಟಕದಲ್ಲಿ ಒಬಿಸಿ ಸಮುದಾಯಕ್ಕೆ ಸೇರಿದ ಈಶ್ವರಪ್ಪ ಅವರನ್ನು ಬಿಟ್ಟರೆ ಇಲ್ಲಿಯವರೆಗೆ ದಲಿತರು, ಅಲ್ಪಸಂಖ್ಯಾತರು ಹೀಗೆ ಯಾರನ್ನೂ ಅಧ್ಯಕ್ಷರನ್ನಾಗಿ ಮಾಡಿಲ್ಲ. ಯಡಿಯೂರಪ್ಪ ಅವರ ಮಗ ಎನ್ನುವ ಕಾರಣಕ್ಕೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮಾಡಿದ ಕೆಲಸವನ್ನು ಸಹಿಸದೆ ಬಿಜೆಪಿಯ ಎಲ್ಲಾ ನಾಯಕರು ಷಡ್ಯಂತ್ರ ಮಾಡಿ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಲಾಯಿತು. ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡಲಾಯಿತು ಎಂದು ರಮೇಶ್ ಬಾಬು ಹೇಳಿದರು.
ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಬಿಜೆಪಿಯವರು ಇಂತಹ ವ್ಯರ್ಥ ಪ್ರಲಾಪ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಅಧ್ಯಕ್ಷ ಸ್ಥಾನವನ್ನು ನೀಡಿ. ವಿಜಯೇಂದ್ರ ಅವರೇ ನಿಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ನಿಮ್ಮ ಸ್ಥಾನಕ್ಕೆ ದಲಿತ ನಾಯಕರನ್ನು ಕೂರಿಸಿ ಎಂದು ಪತ್ರ ಬರೆಯಿರಿ. ನಿಮ್ಮಿಂದ ಸಲಹೆ ತೆಗೆದುಕೊಳ್ಳುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಬಂಗಾರು ಲಕ್ಮಣ್ ಅವರನ್ನು ಯಾವ ಕಾರಣಕ್ಕೆ ಜೈಲಿಗೆ ಕಳುಹಿಸಲಾಯಿತು ಇದರ ಹಿಂದೆ ನಿಮ್ಮ ನಾಯಕರು ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ರಮೇಶ್ ಬಾಬು ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.