ಬೆಂಗಳೂರು: ಶಕ್ತಿ ಯೋಜನೆ ಎಂಬುದು ಮಹಿಳಾ ಸಬಲೀಕರಣದೆಡೆಗಿನ ನಮ್ಮ ಸರ್ಕಾರದ ದಿಟ್ಟ ಹೆಜ್ಜೆಯಾಗಿದ್ದು, 2,000 ಹೊಸ ಬಸ್‌ಗಳ ಖರೀದಿ ಗೆ ಸರ್ಕಾರದ ಅನುಮತಿ ಸಿಕ್ಕಿದೆ. ಜೊತೆಗೆ ಸರ್ಕಾರದಿಂದ ಅನುದಾನ ಸಿಕ್ಕಿದ್ದು ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಣ್ಣಿಸಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ದಿನನಿತ್ಯ ಪ್ರಯಾಣಿಸುವವರ ಸಂಖ್ಯೆ ಲಕ್ಷಗಳಿಂದ ಕೋಟಿಗೆ ದಾಟಿದೆ. ಹಿಂದಿನ ಸರ್ಕಾರದಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿರಲಿಲ್ಲ. ಹೊಸ ನೇಮಕಾತಿ ಕೂಡ ಸ್ಥಗಿತಗೊಂಡಿದ್ದರಿಂದ ಸಾರಿಗೆ ಸಂಸ್ಥೆಗಳು ತತ್ತರಿಸಿ ಹೋಗಿದ್ದ ಆ ಸಮಯದಲ್ಲಿ, ಶಕ್ತಿ ಯೋಜನೆ ಅನುಷ್ಠಾನ ಸುಲಭದ ಮಾತಾಗಿರಲಿಲ್ಲ, ನಿಜಕ್ಕೂ ಸವಾಲಾಗಿತ್ತು.
ಆ ಸಮಯದಲ್ಲಿ ನಮ್ಮ ಸರ್ಕಾರವು 5800 ಹೊಸ ಬಸ್ಸುಗಳ ಸೇರ್ಪಡೆಗೆ ಹಾಗೂ 9000 ಹೊಸ ನೇಮಕಾತಿಗೆ ಅನುಮತಿ ಮತ್ತು 1000 ಅನುಕಂಪದ ಆಧಾರದ ನೇಮಕಾತಿಗಳು, ಈ ಸವಾಲನ್ನು ಸಕಾರಾತ್ಮಕವಾಗಿ ಎದುರಿಸಿ, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲು ಸಹಕಾರಿಯಾಯಿತು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸಾರಿಗೆ ಸಂಸ್ಥೆಗಳು ರೂ.2000 ಕೋಟಿ ಸಾಲ ತೆಗೆದುಕೊಳ್ಳಲು ಮುಖ್ಯಮಂತ್ರಿ ಅನುಮತಿ ನೀಡಿದರು. ಆ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದು, ಅದರಂತೆ ಈ ಸಾಲಿನ ಬಜೆಟ್ ನಲ್ಲಿ ಆ ಸಂಬಂಧ ಮೊತ್ತವನ್ನು ಪ್ರಧಾನ ಮಾಡಲಾಗಿದೆ ಎಂದು ಸಚಿವರು ಸಂತಸ ಹಂಚಿಕೊಂಡಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಹಳೆಯ ಬಸ್ಸುಗಳ ನಿಷ್ಕ್ರಿಯ ಗೊಳಿಸಲೇಬೇಕಾಗಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹೊಸ ಬಸ್ಸುಗಳ ಸೇರ್ಪಡೆಯನ್ನು ಪ್ರಸ್ತುತ ಬಜೆಟ್ ನಲ್ಲಿ ಘೋಷಿಸಿದ್ದರು. ಆದರೆ 2005-2006 ರಲ್ಲಿ ಜಿ.ಸಿ.ಸಿ ಆಧಾರದಲ್ಲಿ ಡೀಸೆಲ್ ಬಸ್ಸುಗಳ ಕಾರ್ಯಾಚರಣೆಯು ಸಾರಿಗೆ ಸಂಸ್ಥೆಗಳಲ್ಲಿ ಯಶಸ್ವಿಯಾಗಿಲ್ಲ. ಈ ಬಗ್ಗೆ ಸಾರಿಗೆ ಸಚಿವರು, ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಗಮನಸೆಳೆದ ನಂತರ ಇದು ಸಾಕಾರಗೊಂಡಿದೆ.
ಬಜೆಟ್‌ನಲ್ಲಿ ಸಾರಿಗೆ ನಿಗಮಗಳಿಗೆ 1,000 ಬಸ್‌ಗಳನ್ನು ಜಿಸಿಸಿ ಮೂಲಕ ಒದಗಿಸುವ ಬಗ್ಗೆ ಘೋಷಿಸಿರುವುದನ್ನು ಪರಿಷ್ಕರಿಸಿ 2,000 ಹೊಸ ಬಸ್‌ಗಳನ್ನು ಖರೀದಿಸಲು ಮತ್ತು ಇದಕ್ಕೆ ಬೇಕಾಗಿರುವ ಅನುದಾನವನ್ನು ಸರ್ಕಾರವೇ ಒದಗಿಸಲಾಗುವುದು ಎಂದು ಅಧಿವೇಶನದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲವಾಗಿದೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.