ಬೆಂಗಳೂರು: ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಶಿಕ್ಷಣ ಕ್ಷೇತ್ರದಲ್ಲಿ ಚಟುವಟಿಕೆಗಳು ಬಿರುಸುಗೊಂಡಿದೆ. ಸುದೀರ್ಘ ರಜೆ ಮುಗಿಸಿ ಹೊಸ ತರಗತಿಗೆ ತೆರಳುತ್ತಿರುವ ವಿದ್ಯಾರ್ಥಿಗಳಲ್ಲೂ ಸಂತಸ ಕಂಡುಬರುತ್ತಿದೆ. ಅದರಲ್ಲೂ ಬೆಂಗಳೂರಿನ ಬಿಟಿಎಂ ಕ್ಷೇತ್ರ ಕ್ಷೇತ್ರದ ಶಾಲೆಗಳಲ್ಲಿ ವಿದ್ಯಾರ್ಥಿ ಸಮೂಹದ ಉತ್ಸಾಹ ಎಲ್ಲಿಲ್ಲದಂತೆ ಕಂಡುಬರುತ್ತಿದೆ.
ಬಿಟಿಎಂ ವಿಧಾನಸಭಾ ಕ್ಷೇತ್ರ ಇದೀಗ ಬೆಂಗಳೂರು ನಗರದ ‘ಶಿಕ್ಷಣ ಕಾಶಿ’ ಎಂಬಂತೆ ಬಿಂಬಿತವಾಗಿದೆ. ಸ್ಥಳೀಯ ಶಾಸಕರೂ ಆದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪ್ರಯತ್ನದ ಫಲವಾಗಿ ಸರ್ಕಾರಿ ಶಾಲೆಗಳು ಕಾರ್ಪೊರೇಟ್ ಶಾಲೆಗಳನ್ನು ನಾಚಿಸುವಂತೆ ಅಭಿವೃದ್ಧಿ ಕಂಡಿವೆ. ಈ ಬಾರಿಯ ಫಲಿತಾಂಶದಲ್ಲೂ ಭರ್ಜರಿ ಯಶಸ್ಸು ಕಂಡಿದ್ದು, ಶಾಸಕರ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಕೋರಮಂಗಲದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರೋಬ್ಬರಿ 13 ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳು, ಬ್ಯಾಗ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಸಚಿವ ರಾಮಲಿಂಗ ರೆಡ್ಡಿ, ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಒಟ್ಟು 43 ಶಾಲಾ-ಕಾಲೇಜುಗಳಿಗೆ ನೋಟ್ ಬುಕ್ ಗಳು ಮತ್ತು ಬ್ಯಾಗ್ ಗಳನ್ನು ಜೂನ್ 9 ರಿಂದ 15 ರೊಳಗೆ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಸರ್ಕಾರಿ ಶಾಲಾ/ಕಾಲೇಜುಗಳು, ಸರ್ಕಾರಿ ಅನುದಾನಿತ ಶಾಲೆಗಳು, ಅತ್ಯಂತ ಬಡ ಜನರು ವಾಸಿಸುವ ಪ್ರದೇಶದಲ್ಲಿನ ಕಾನ್ವೆಂಟ್ ಶಾಲೆಗಳು ವಿಚಾರದಲ್ಲಿ ಸ್ವಯಂಪ್ರೇರಿತರಾಗಿ ಮಾರ್ಗದರ್ಶನ, ಆರ್ಥಿಕ ನೆರವು ನೀಡುತ್ತಿರುವ ರಾಮಲಿಂಗ ರೆಡ್ಡಿ, ತಮ್ಮ ಕ್ಷೇತ್ರದಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದು ನಾಡಿನ ಗಮನಸೆಳೆಯಿತು. ವಿವಿಧ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ಮಕ್ಕಳಿಗೆ ಅಗತ್ಯ ಸಾಮಗ್ರಿಗಳನ್ನು ಅವರು ವಿತರಿಸಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಸ್ಥಳೀಯ ಮಾಜಿ ಬಿಬಿಎಂಪಿ ಸದಸ್ಯರು, ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಹಾಗೂ ಸ್ಥಳೀಯ ನಾಯಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆದಿದೆ.