ಬೆಂಗಳೂರು: ರಾಜ್ಯಪಾಲರ ಕಚೇರಿಯನ್ನು ಹೊಂದಿರುವ ರಾಜಭವನ ಸರ್ಕಾರದ ಕಚೇರಿ ಅಲ್ಲವೇ? ಇಂಥದ್ದೊಂದು ಅನುಮಾನ ಸಾರ್ವಜನಿಕರನ್ನು ಕಾಡಿದೆ. ಸರ್ಕಾರದ ಎಲ್ಲಾ ಕಚೇರಿಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುತ್ತದೆಯಾದರೂ ರಾಜಭವನದ ಅಧಿಕಾರಿಗಳು, ತಮ್ಮ ಕಚೇರಿ RTI ಅಡಿ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ವಕ್ತಾರರೂ ಆಗಿರುವ ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ಆಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ, ರಾಜ್ಯದ ಶಾಸನಸಭೆಯ ಮಾಜಿ ಸದಸ್ಯ ಹಾಗೂ ವಕೀಲರೂ ಆಗಿರುವ ರಮೇಶ್ ಬಾಬು ಅವರು ಹೊರಡಿಸಿರುವ ಮಾಧ್ಯಮ ಪ್ರಕಟಣೆ ಗಮನಸೆಳೆದಿದೆ. ಮಾಹಿತಿಯನ್ನು ಒದಗಿಸಲು ಕರ್ನಾಟಕ ರಾಜ್ಯಪಾಲರ ಕಾರ್ಯಾಲಯ ನಿರಾಕರಿಸಿರುತ್ತದೆ. ಕರ್ನಾಟಕ ಮಾಹಿತಿ ಆಯೋಗದಲ್ಲಿ ರಾಜ್ಯಪಾಲರು ಮಾಹಿತಿ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಕುರಿತಾದ ವಿಚಾರಣೆ ಬಾಕಿ ಇರುವುದಾಗಿ ಸಬೂಬನ್ನು ಹೇಳಿ ಮಾಹಿತಿ ಒದಗಿಸಲು ನಿರಾಕರಿಸಿರುತ್ತಾರೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಾಂವಿಧಾನಿಕ ಹುದ್ದೆಗಳು ಸಾರ್ವಜನಿಕ ಹುದ್ದೆಗಳಾಗಿದ್ದು, ಇವರು ಕಾನೂನಿಗೆ ಅತೀತರಾಗಿರುವುದಿಲ್ಲ. ಈ ದೇಶದ ಸಂಸದೀಯ ವ್ಯವಸ್ಥೆಯ ಆಡಳಿತ ಪ್ರಮುಖರಾದ ರಾಷ್ಟ್ರಪತಿಗಳೇ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿಯನ್ನು ಒದಗಿಸುವಾಗ, ರಾಜ್ಯಪಾಲರ ಕಾರ್ಯಾಲಯವು ಕುಂಟು ನೆಪವೊಡ್ಡಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಒಂದು ವೇಳೆ ಕರ್ನಾಟಕ ಮಾಹಿತಿ ಆಯೋಗದಲ್ಲಿ ರಾಜ್ಯಪಾಲರ ಸಾರ್ವಜನಿಕ ಪ್ರಾಧಿಕಾರ ಪರಿಭಾಷೆ ವ್ಯಾಪ್ತಿಯ ಪ್ರಕರಣ ಬಾಕಿ ಇದ್ದಲ್ಲಿ, ಸದರಿ ಪ್ರಕರಣವನ್ನು ಒಂದು ದಿನದಲ್ಲಿ ಇತ್ಯರ್ಥ ಮಾಡಬೇಕಿತ್ತು. ವಿನಾಕಾರಣ ಸದರಿ ಪ್ರಕರಣ ಬಾಕಿ ಇಟ್ಟಿದ್ದರೆ, ಇದು ನಿಧಾನಗತಿ ಅನುಸರಣೆಯ ತಂತ್ರದ ಜೊತೆಗೆ ರಾಜಭವನ ಕಾರ್ಯಾಲಯದೊಂದಿಗೆ ಷಾಮೀಲುತನವಾಗಿರುತ್ತದೆ. ಸಾಂವಿಧಾನಿಕ ಹುದ್ದೆಯಲ್ಲಿ ಜವಾಬ್ದಾರಿಯ ಜೊತೆಗೆ ಸಾರ್ವಜನಿಕ ಸೇವಕರು ಉತ್ತರದಾಯಿತ್ವವನ್ನು ಹೊಂದಬೇಕಾಗುತ್ತದೆ. ಸಾರ್ವಜನಿಕ ಸೇವಕರು ತಮ್ಮ ಅನುಕೂಲಕ್ಕಾಗಿ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು, ಕಾನೂನಿನ ಲೋಪಗಳನ್ನು ಹುಡುಕಿ ಪ್ರಕರಣಗಳನ್ನು ಬಾಕಿ ಇಟ್ಟರೆ ನ್ಯಾಯಾಲಯವು ಇಂಥವರ ಮೇಲೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಬೇಕಾಗುತ್ತದೆ ಎಂದು ಅವರು ವಾದವನ್ನು ಮುಂದಿಟ್ಟಿದ್ದಾರೆ.
ರಾಷ್ಟ್ರಪತಿ ಕಾರ್ಯಾಲಯವು ಸಾರ್ವಜನಿಕರಿಗೆ ನೇರವಾಗಿ ಮತ್ತು ಆನ್‍ಲೈನ್ ಮುಖಾಂತರ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿಯನ್ನು ನೀಡುತ್ತಿದೆ. ಅದೇ ರೀತಿ ದೇಶದ ಅನೇಕ ರಾಜ್ಯಗಳ ರಾಜ್ಯಪಾಲರ ಕಾರ್ಯಾಲಯಗಳು ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ನೀಡುತ್ತಿವೆ. ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕಾರ್ಯಾಲಯಗಳು ವೆಬ್‍ಸೈಟ್ ಗಳನ್ನು ಹೊಂದಿದ್ದು ತಮ್ಮ ಕಾರ್ಯಾಲಯದ ಮಾಹಿತಿಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೆ ಮಾಡಿಕೊಳ್ಳುತ್ತಿವೆ. ಆದರೆ ಕರ್ನಾಟಕದ ರಾಜ್ಯಪಾಲರ ಕಾರ್ಯಾಲಯದ ವೆಬ್‍ಸೈಟ್ ನಲ್ಲಿ ಯಾವುದೇ ಸಾರ್ವಜನಿಕ ಮಾಹಿತಿ ದೊರೆಯುವುದಿಲ್ಲ. ಇಲ್ಲಿನ ಎಲ್ಲಾ ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದು ಸಾರ್ವಜನಿಕ ಹಣ ವೆಚ್ಚದ ಮಾಹಿತಿ ದೊರೆಯುತ್ತಿಲ್ಲ. ರಾಜ್ಯಪಾಲರ ಅವಧಿ ಮುಗಿದಿದ್ದರೂ, ಇವರು ಮುಂದುವರೆಯುತ್ತಿರುವ ಕುರಿತು ಅನೇಕ ಅನುಮಾನಗಳಿರುತ್ತವೆ. ಕರ್ನಾಟಕ ರಾಜ್ಯದ ಜನರ ಹಣದಲ್ಲಿ ರಾಜಭವನದ ಅಧಿಕಾರ ಚಲಾವಣೆ ಆಗುತ್ತಿದ್ದು, ರಾಜ್ಯಪಾಲರ ಪ್ರತಿ ನಡೆ ಅನುಮಾನಗಳಿಗೆ ಅವಕಾಶ ನೀಡುತ್ತಿದೆ. ಸೆಪ್ಟಂಬರ್ 2014 ರಿಂದ ಈಗಿನ ರಾಜ್ಯಪಾಲರು ಕರ್ನಾಟಕದ ರಾಜ್ಯಪಾಲರಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಇಲ್ಲಿಯವರೆಗೆ ರಾಜ್ಯಪಾಲರ ಮತ್ತು ಅವರ ಕಾರ್ಯಾಲಯಕ್ಕೆ ಆಗಿರುವ ಹಾಗೂ ಆಗುತ್ತಿರುವ ವೆಚ್ಚಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರವು ಮಾಹಿತಿ ಒದಗಿಸಲು ಒತ್ತಾಯಿಸುತ್ತೇನೆ ಎಂವರು ಹೇಳಿದ್ದಾರೆ.
ಯಾವುದೇ ರಾಜ್ಯಪಾಲರ ಕಾರ್ಯಾಲಯ ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡಲು ಅವಕಾಶವಿಲ್ಲ. ರಾಷ್ಟ್ರಪತಿಗಳು ಕರ್ನಾಟಕ ರಾಜ್ಯದ ರಾಜ್ಯಪಾಲರ ಕಾರ್ಯಾಲಯಕ್ಕೆ ಸೂಕ್ತ ನಿರ್ದೇಶನ ನೀಡಿ ಸಾರ್ವಜನಿಕರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕಿದೆ ಎಂದಿರುವ ರಮೇಶ್ ಬಾಬು, ಕರ್ನಾಟಕ ಮಾಹಿತಿ ಆಯೋಗವು ರಾಜ್ಯಪಾಲರ ಪರಿಭಾಷೆ ವ್ಯಾಪ್ತಿಯ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕಾನೂನಾತ್ಮಕವಾಗಿ ಪ್ರಕರಣವನ್ನು ಮುಕ್ತಾಯಗೊಳಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಆದೇಶ ನೀಡಬೇಕೆಂದೂ ಕೋರಿದ್ದಾರೆ.