ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಕಂದಾಯ ಸಚಿವ ಆರ್.ಅಶೋಕ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆರ್.ಅಶೋಕ್ ಅವರು ಸಲ್ಲಿಸಿರುವ ನಾಮಪತ್ರ ಇದೀಗ ವಿವಾದವನ್ನು ಮೆತ್ತಿಕೊಂಡಿದೆ. ಈ ಬಗ್ಗೆ ಮಾಜಿ ಶಾಸಕರೂ ಆದ ಕಾಂಗ್ರೆಸ್ ನಾಯಕ ರಮೇಶ್ ಬಾಬು ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಈ ಬೆಳವಣಿಗೆ ಆಡಳಿತಾರೂಢ ಬಿಜೆಪಿಗೂ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದೆ.
ಏನಿದು ವಿವಾದ..?
ಪದ್ಮನಾಭನಗರ-171 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಿ ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿರುವ ಸಚಿವ ಆರ್.ಅಶೋಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆ ಸಂಬಂಧ ಬಿಜೆಪಿ ಪಕ್ಷವು ನೀಡಿರುವ ಮಾಹಿತಿ ವಿವಾದವನ್ನು ಹುಟ್ಟು ಹಾಕಿದೆ. ನಾಮಪತ್ರ ಸಂದರ್ಭದಲ್ಲಿ ಆರ್.ಅಶೋಕ್ ವಿಚಾರವಾಗಿ ಬಿಜೆಪಿ ಪಕ್ಷದ ವತಿಯಿಂದ ಸಲ್ಲಿಕೆಯಾಗಿರುವ ಫಾರ್ಮ್-7ರಲ್ಲಿ ‘”He is well qualified with a Bachelor of Law ” ಎಂದು ಹೇಳಲಾಗಿದೆ. ಅದರೆ, ನಾಮಪತ್ರ ಸಂದರ್ಭದಲ್ಲಿ ಅಭ್ಯರ್ಥಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಾನು ಕಾನೂನು ಪದವೀಧರ ಎಂಬುದನ್ನು ತೋರಿಸಿಲ್ಲ. ಈ ಮೂಲಕ ಆರ್.ಅಶೋಕ್ ಅವರ ವಿಚಾರದಲ್ಲಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ಈ ಲೋಪದ ಕುರಿತಂತೆ ರಮೇಶ್ ಬಾಬು ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಆರ್.ಅಶೋಕ್ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಬೇಕೆಂದು ರಮೇಶ್ ಬಾಬು ಅವರು ದೂರಿನಲ್ಲಿ ಕೋರಿದ್ದಾರೆ.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಆದೇಶದಂತೆ ಅಪರಾಧ ಪ್ರಕರಣಗಳ ಸಹಿತ ಕೆಲವು ಮಹತ್ವದ ಮಾಹಿತಿಯನ್ನು ನಮೂದಿಸಲೇಬೇಕಿದೆ. ತಪ್ಪು ಮಾಹಿತಿ ನೀಡಿದಲ್ಲಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಈ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಿಲ್ಲ ಎಂದು ಹಿರಿಯ ವಕೀಲರೂ ಆದ ರಮೇಶ್ ಬಾಬು ಅವರು ಅಭಿಪ್ರಾಯಪಟ್ಟಿದ್ದಾರೆ.