ದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಅಖಾಡವೆನಿಸಿರುವ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಕ್ಷೇತ್ರ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದು.
ಈ ಬಾರಿ ಬಿಜೆಪಿಯು ಹೊಸ ಮುಖವನ್ನು ಪರಿಚಯಿಸಿದೆ. ಬಿಜೆಪಿ ಬಿಡುಗಡೆ ಮಾಡಿರುವ ಮೊದ ಪಟ್ಟಿಯಲ್ಲೇ ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿ ಆಶಾ ಕೃಷ್ಣಪ್ಪ ಅವರಿಗೆ ಟಿಕೆಟ್ ಘೋಷಿಸಿದೆ. ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ನಾಯಕರ ಭರ್ಜರಿ ರೇಸ್ ನಡೆದಿದ್ದು ಹೈಕಮಾಂಡ್‌ನಿಂದ ಅಚ್ಚರಿಯ ಸಂದೇಶವೊಂದು ರವಾನೆಯಾಗಿದೆ.
ಕಾಂಗ್ರೆಸ್ ಹುರಿಯಾಳು ಸ್ಥಾನಕ್ಕೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಅಶೋಕ್ ರೈ ಹೆಸರು ಮುಂಚೂಣಿಯಲ್ಲಿದ್ದು, ಈ ಪೈಕಿ ಅಶೋಕ್ ರೈ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗಿದೆ. ಕೈ ವರಿಷ್ಠರ ಅಂಗಳದಿಂದ ಮಂಗಳವಾರ ಅಶೋಕ್ ರೈ ಅವರಿಗೆ ಸಂದೇಶ ರವಾನೆಯಾಗಿದ್ದು, ಕ್ಷೇತ್ರದಲ್ಲಿ ಪ್ತಚಾರವನ್ನು ಬಿರುಸುಗೊಳಿಸುವಂತೆ ಸೂಚಿಸಿದ್ದಾರೆ.
ಯಾರಿವರು ಅಶೋಕ್ ರೈ?
ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕರಾಗಿರುವ ಅಶೋಕ್ ರೈ ಕಳೆದೆರಡು ದಶಕಗಳಲ್ಲಿ ಪುತ್ತೂರು ಭಾಗದಲ್ಲಿ ಸಾಮಾಜಿಕ ಕೆಲಸ ಮೂಲಕ ಗಮನಸೆಳೆದಿದ್ದಾರೆ. ಮಾಜಿ ಸಿಎಂ ಸದಾನಂದಗೌಡರ ಆಪ್ತರಾಗಿರುವ ಇವರು, ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ ಕರಾವಳಿ ಭಾಗದಲ್ಲಿ ಸಿಎಂ ಪರವಾಗಿ ಪಕ್ಷಬೇಧ ಮರೆತು ಜನಹಿತ ಕೆಲಸ ಮಾಡುತ್ತಿದ್ದರು ಎಂಬುದು ಸ್ಥಳೀಯರ ಮಾತುಗಳು.
ಈ ನಡುವೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದೆರಡು ದಶಕಗಳಲ್ಲಿ ತಮ್ಮದೇ ಆದ ಫೌಂಡೇಷನ್ ಸುಮಾರು 20 ಸಾವಿರ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದ ಅಶೋಕ್ ರೈ ಅವರು ಈ ಕುಟುಂಬಗಳ ಆಶೀರ್ವಾದವನ್ನೇ ನೆಚ್ಚಿಕೊಂಡಿದ್ದಾರೆ. ಸದ್ಯ ರೈ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ನೂರಾರು ವಮಂದಿ ಬಿಜೆಪಿ ಕಾರ್ಯಕರ್ತರೂ ಇವರ ಜೊತೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಕ್ಷೇತ್ರದಲ್ಲಿ ಬಂಟ ಸಮುದಾಯದ ಮತಗಳೂ ಹೆಚ್ಚಿರುವುದರಿಂದಾಗಿ ತಮ್ಮ ಜಾತಿಯ ಮತಗಳೂ ಸಿಗಬಹುದೆಂಬ ಲೆಕ್ಕಾಚಾರ ಅವರದ್ದು. ಹಾಗಾಗಿ ಪುತ್ತೂರು ಕ್ಷೇತ್ರ ತೀವ್ರ ಕುತೂಹಲದ ಅಖಾಡವಾಗಿದೆ