ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಾಡಿರುವ ಬಸ್ ಟಿಕೆಟ್ ದರ ಏರಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದರು. ಬಸ್ ಪ್ರಯಾಣಿಕರ ಕೈಗೆ ಹೂ ನೀಡಿ, ಸಿಎಂ ಸಿದ್ದರಾಮಯ್ಯನವರ ಪರವಾಗಿ ಕ್ಷಮೆ ಯಾಚಿಸಿದ ಸನ್ನಿವೇಶ ಗಮನಸೆಳೆಯಿತು.
ಬಸ್ನಲ್ಲಿ ಕುಳಿತಿದ್ದ ಪ್ರಯಾಣಿಕರ ಬಳಿ ಹೋದ ಪ್ರತಿಪಕ್ಷ ನಾಯಕರಾದ ಆರ್.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ, ‘ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುವುದಿಲ್ಲವೆಂದು ನೀವು ಮತ ನೀಡಿದ್ದೀರಿ. ಆದರೆ ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷದಂದೇ ಟಿಕೆಟ್ ದರ ಏರಿಕೆ ಮಾಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ’ ಎಂದರು.
ಬಸ್ ದರ ಏರಿಕೆಯ ಮೂಲಕ ಪ್ರಯಾಣಿಕರ ಕಿವಿಗೆ ಹೂವು ಇಡುತ್ತಿರುವ @INCKarnataka ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದೆ. ಗ್ಯಾರಂಟಿಯಿಂದಾಗಿರುವ ನಷ್ಟವನ್ನು ಬೆಲೆ ಏರಿಕೆಯ ಮೂಲಕ ಸರಿದೂಗಿಸುವ ತಂತ್ರ ಅವೈಜ್ಞಾನಿಕ.
ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿ, ಇಬ್ಬರು ಪ್ರಯಾಣಿಕರ ದರವನ್ನು ಪುರುಷರಿಂದಲೇ ವಸೂಲು ಮಾಡುವ ನೀತಿಯೇ… pic.twitter.com/C3IuE61iga
— BJP Karnataka (@BJP4Karnataka) January 3, 2025
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕರು, ನಿಮ್ಮ ಕಾಲಿಗೆ ಬೀಳುತ್ತೇವೆ, ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯನವರ ಹೊಸ ಸ್ಲೋಗನ್. ಟಿಕೆಟ್ ದರ 200-300 ರೂಪಾಯಿ ಜಾಸ್ತಿಯಾಗಿದೆ. ಬಸ್ಗಳ ಟಿಕೆಟ್ ದರ ಮಾತ್ರ ಅಲ್ಲ, ಮುಂದೆ ಹಾಲಿನ ದರವನ್ನೂ ಏರಿಕೆ ಮಾಡುತ್ತೇವೆ. ನೀರಿನ ದರವನ್ನು ಏರಿಕೆ ಮಾಡುತ್ತೇವೆ, ಎಲ್ಲಾ ವಸ್ತುಗಳ ಬೆಲೆಯನ್ನು ಗಗನಕ್ಕೆ ಮುಟ್ಟಿಸುವ ಶಪಥವನ್ನು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಪರವಾಗಿ ನಾನು ಹೇಳಿದ್ದೇನೆ. ಈಗ ಪ್ರಯಾಣಿಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಪತ್ನಿಗೆ ಉಚಿತ ಟಿಕೆಟ್ ನೀಡಿ ಪತಿಗೆ ಡಬಲ್ ಚಾರ್ಜ್ ಮಾಡಿದರೆ ನಮ್ಮ ಮನೆ ದುಡ್ಡೇ ಖರ್ಚಾಗೋದು ಅಲ್ವಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. 2025 ರಲ್ಲಿ ಎಲ್ಲ ತೆರಿಗೆ ಜಾಸ್ತಿ ಮಾಡುತ್ತೇವೆ. ನಿಮ್ಮ ಕಾಲಿಗೆ ಬೀಳುತ್ತೇವೆ. ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಹೊಸ ಸ್ಲೋಗನ್ ಎಂದು ಲೇವಡಿ ಮಾಡಿದರು.
ವರ್ಷದ ಆರಂಭದಲ್ಲೇ ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ 7 ಕೋಟಿ ಜನರಿಗೆ ಬಸ್ ದರ ಏರಿಕೆಯ ಉಡುಗೊರೆ ನೀಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪೆಟ್ರೋಲ್ – ಡೀಸೇಲ್ ದರ, ಹಾಲಿನ ದರ, ಆಲ್ಕೋಹಾಲ್ ದರ, ನೀರಿನ ದರ, ಮುದ್ರಾಂಕ ಶುಲ್ಕ ಹೀಗೆ ಎಲ್ಲವೂ ಏರಿಕೆಯಾಗುತ್ತಿದೆ.
– ಶ್ರೀ @RAshokaBJP , ಪ್ರತಿಪಕ್ಷ ನಾಯಕರು#CongressFailsKarnataka… pic.twitter.com/j4Ew0IqkOk
— BJP Karnataka (@BJP4Karnataka) January 3, 2025
ಹಿಂದಿನ ಬಿಜೆಪಿ ಸರ್ಕಾರ ಯಾವುದನ್ನೂ ಉಚಿತವಾಗಿ ಕೊಟ್ಟಿರಲಿಲ್ಲ. ಆದರೆ ಈ ಸರ್ಕಾರ ಚುನಾವಣೆಗೂ ಮುನ್ನ ಉಚಿತವಾಗಿ ಕೊಡುತ್ತೇವೆಂದು ಹೇಳಿ ನಂತರ ಪೆಟ್ರೋಲ್, ಡಿಸೇಲ್ ದರ ಏರಿಸಿದೆ. ಮಕ್ಕಳು ಕುಡಿಯುವ ಹಾಲಿಗೂ ಕಲ್ಲು ಹಾಕಿದ್ದಾರೆ. ಮದ್ಯದ ದರ 50 ರೂಪಾಯಿ ಏರಿಕೆ ಮಾಡಿದ್ದಾರೆ. ಸ್ಟ್ಯಾಂಪ್ ಕಾಗದ ದರ, ಮನೆ ತೆರಿಗೆ, ವಿದ್ಯುತ್ ದರ ಏರಿಸಿದ್ದಾರೆ. ಮಾಧ್ಯಮದವರು ಕೂಗಾಡಿದರೂ ನಾನು ನೀರಿನ ತೆರಿಗೆ ಜಾಸ್ತಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಹೊಸ ವರ್ಷಕ್ಕೆ ಗಿಫ್ಟ್ ಕೊಟ್ಟಿದ್ದಾರೆ. ಹಾಗೆಯೇ ಸಿಎಂ ಸಿದ್ದರಾಮಯ್ಯ ಕೂಡ ಕರ್ನಾಟಕದ ಜನತೆಗೆ ಬಸ್ ದರ ಏರಿಕೆಯ ಗಿಫ್ಟ್ ನೀಡಿದ್ದಾರೆ. ಇಂತಹ ಸಾರಿಗೆ ಸಚಿವರನ್ನು ನಾವು ನೋಡಲು ಸಾಧ್ಯವೇ ಇಲ್ಲ. ಹತ್ತು ವರ್ಷಗಳಿಂದ ಟಿಎ, ಡಿಎಂ ಜಾಸ್ತಿಯಾಗಿಲ್ಲವೇ? ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿಲ್ಲವೇ? ಹಾಗಾದರೆ ಹಿಂದಿನ ಬಿಜೆಪಿ ಸರ್ಕಾರ ಯಾಕೆ ದರ ಏರಿಕೆ ಮಾಡಿಲ್ಲ? 2013 ರಲ್ಲಿ ನಾನು ಸಾರಿಗೆ ಸಚಿವನಾಗಿದ್ದೆ. ನಾನು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿಗೆ 1 ಸಾವಿರ ಕೋಟಿ ರೂ.ಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ. ಕೋವಿಡ್ ಸಮಯದಲ್ಲಿ ಬಸ್ ಸಂಚಾರ ಇರಲಿಲ್ಲವಾದ್ದರಿಂದ ನಷ್ಟವಾಗಿತ್ತು. ಆದರೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನೌಕರರ ಸಂಬಳ ಹೆಚ್ಚ ಮಾಡಲೇಬೇಕು. ನಾನು ಇದ್ದಾಗಲೂ ಸಂಬಳ ಹೆಚ್ಚು ಮಾಡಿಸಿದ್ದೆ. ಆದರೆ ಈಗಿನ ಸರ್ಕಾರ ಸಾಲ ಮಾಡಿ ಆ ಹೊರೆಯನ್ನು ಜನರ ಮೇಲೆ ಹೇರುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದರು.