📝 ಡಾ. ಕೆ.ಎಸ್.ಎನ್.ದೀಕ್ಷಿತ್
ಮುಖ್ಯ ಪ್ರಧಾನ ಕಾರ್ಯದರ್ಶಿ,
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ , ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ).
ಮುಜರಾಯಿ ದೇಗುಲಗಳ ವಿಚಾರ ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಅದರಲ್ಲೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಬೆಳವಣಿಗೆಯು ಆಸ್ತಿಕ ಸಮೂಹವನ್ನೇ ಗೊಂದಲದಲ್ಲಿ ಸಿಲುಕಿಸಿದೆ.
ಕರ್ನಾಟಕ ಸರ್ಕಾರವು ಮುಜರಾಯಿ ದೇವಾಲಯಗಳ ವಿಚಾರದಲ್ಲಿ ಆಗಾಗ್ಗೆ ಬದಲಾವಣೆ ತರುತ್ತಲೇ ಇದೆ. ಆದರೆ ಈ ಬಾರಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ವಿಚಾರ ರಾಜಕೀಯ ಅಖಾಡದಲ್ಲಿ ಚರ್ಚೆ ನಡೆಯುವುದಕ್ಕಿಂತಲೂ ಧಾರ್ಮಿಕ ವಲಯದಲ್ಲಿ ಅಭಿಪ್ರಾಯ ಸಂಗ್ರಹವಾಗಬೇಕಿತ್ತು.
ಕಾಯಿದೆಯಲ್ಲಿ ಏನಿದೆ? ಏನಿರಬೇಕಿತ್ತು?
ಪ್ರಸ್ತುತ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು 1997ರಲ್ಲಿ ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಜಿಸಬೇಕು ಎನ್ನುವ ನಿಬಂಧನೆ ಕಾಯಿದೆಯಲ್ಲಿಯೇ ಅಡಕವಾಗಿದೆ. 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ, ಸಂಗ್ರಹಣಾ ನಿಧಿಯನ್ನು ಪಡೆಲಾಗುತ್ತಿದ್ದು, ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರವೇ ಬಳಸಬೇಕೆನ್ನುವ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ರೂ.5 ಲಕ್ಷ ದಿಂದ ರೂ.10 ಲಕ್ಷಕ್ಕೆ 5% ಹಾಗೂ ರೂ.10 ಲಕ್ಷ ಮೇಲ್ಪಟ್ಟ ಆದಾಯದ ದೇವಸ್ಥಾನಗಳಿಂದ 10% ಸಂಗ್ರಹಣಾ ನಿಧಿ ಪಡೆಯುವ ಬಗ್ಗೆ ಖಾಯಿದೆಗೆ ತಿದ್ದುಪಡಿ ತರಲಾಗಿತ್ತು ಎಂಬ ವಿಚಾರ ಚರ್ಚೆಗೇ ಬಂದಿಲ್ಲ. ಹಾಗಿರುವಾಗ ಈಗ ಸರ್ಕಾರ ಮಂಡಿಸಿದ ತಿದ್ದುಪಡಿ ವಿಧೇಯಕದಲ್ಲಿ ‘C ‘ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿ, ಅಲ್ಲಿರುವ ಅರ್ಚಕರು, ನೌಕರರ ಮತ್ತು ಅವರ ಕುಟುಂಬದವರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಜಾರಿಗೆ ತರಬೇಕೆಂದಿರುವ ಈ ಕೆಳಕಂಡ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಉಪಯೋಗಿಸುವ ಸದುದ್ದೇಶ ಹೊಂದಿದೆ ಎಂದರೆ ತಪ್ಪಾಗಲಾರದು. .
ಪ್ರತಿ ವರ್ಷ ರೂ.25 ಕೋಟಿ ವೆಚ್ಚದಲ್ಲಿ 1000 ‘C’ ದರ್ಜೆ ದೇವಸ್ಥಾನಗಳ ಅಭಿವೃದ್ಧಿ. ಪ್ರತಿ ವರ್ಷ ರೂ.15 ಕೋಟಿ ಹಣವನ್ನು ಮನೆ ಕಟ್ಟಲು ಸಹಾಯಧನ ನೀಡಲು ನಿಗದಿಪಡಿಸಿದ್ದು, ಹಂತಹಂತವಾಗಿ ಪ್ರತಿವರ್ಷ 750 ಅರ್ಚಕರು/ನೌಕರರಿಗೆ ರೂ.2 ಲಕ್ಷ ಸಹಾಯ ಧನ ನೀಡಿಕೆ. ಪ್ರತಿ ವರ್ಷ ರೂ 5 ಕೋಟಿ ಹಣವನ್ನು ಅರ್ಚಕರ/ನೌಕರರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ನಿಗದಿ. ರೂ.7 ಕೋಟಿ ವೆಚ್ಚದಲ್ಲಿ ಪ್ರತಿ ವರ್ಷ 40,000 ಅರ್ಚಕರು/ನೌಕರರ ವಿಮಾ ಯೋಜನೆಗೆ ಪ್ರೀಮಿಯಂ ಭರಿಸುವುದು. ಯಾವುದೇ ಅರ್ಚಕರು/ನೌಕರರು ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ. 5 ಲಕ್ಷ ಹಣ ನೀಡುವುದು.. ಇಂತಹಾ ಕ್ರಮಗಳನ್ನು ಸ್ವಾಗತಿಸಲೇಬೇಕು.
ಪ್ರಸ್ತುತ ತಿದ್ದುಪಡಿಗೂ ಮುನ್ನ ಈ ನಿಧಿಗೆ ಹಣವು ಈ ಕೆಳಗಿನ ಮಾರ್ಗಗಳಿಂದ ಬರುತ್ತಿತ್ತು:
- ನಿವ್ವಳ ಆದಾಯ ಹತ್ತು ಲಕ್ಷ ರೂ. ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.10;
- ನಿವ್ವಳ ವಾರ್ಷಿಕ ಆದಾಯ ಐದು ಲಕ್ಷ ರೂ. ಗಿಂತ ಹೆಚ್ಚಿದ್ದು ಹತ್ತು ಲಕ್ಷ ರೂ. ಮೀರದ ದೇವಸ್ಥಾನಗಳ ವಾರ್ಷಿಕ ಆದಾಯದಿಂದ ಶೇ.5, ಹಾಗೂ
- ರಾಜ್ಯ ಸರ್ಕಾರದಿಂದ ದೊರೆಯುತ್ತಿದ್ದ ಅನುದಾನ.
ತಿದ್ದುಪಡಿಯ ನಂತರ ಸಾಮಾನ್ಯ ಸಂಗ್ರಹಣಾ ನಿಧಿಗೆ ಹಣವು ಇದೇ ಮೂಲಗಳಿಂದ ಬರಲಿದೆ:
-
ಒಂದು ಕೋಟಿ ರೂ. ನಿವ್ವಳ ಆದಾಯ ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ. 10;
-
ಹತ್ತು ಲಕ್ಷ ರೂ ನಿವ್ವಳ ಆದಾಯಕ್ಕಿಂತ ಹೆಚ್ಚಿದ್ದು ರೂ. 1 ಕೋಟಿ ಮೀರದ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.5, ಹಾಗೂ
-
ರಾಜ್ಯ ಸರ್ಕಾರದಿಂದ ದೊರೆಯುವ ಅನುದಾನ.
ನೂತನ ತಿದ್ದುಪಡಿಯನ್ನು ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಹೆಚ್ಚಿಸುವ ಏಕೈಕ ಉದ್ದೇಶ ಸಮಸ್ತ ಅರ್ಚಕ/ನೌಕರರ ಹಾಗೂ ದೇವಸ್ಥಾನಗಳ ಅಭಿವೃದ್ಧಿ ಯೆಂಬುದು ಎಲ್ಲರಿಗೂ ಅರ್ಥವಾಗುವ ವಿಷಯ. ವಿರೋಧ ಪಕ್ಷವಿರುವುದೇ ವಿರೋಧ ಮಾಡುವುದಕ್ಕೆ ಎಂಬುವಂತೆ ಆಗಬಾರದು, ಅಲ್ಲವೇ?
ಅರ್ಚಕರ ಸಂಘದ ರಾಜ್ಯಧ್ಯಕ್ಷರೇ ಹೇಳಿಕೆ ನೀಡಿರುವಂತೆ, ಪ್ರಸ್ತುತ ಸರ್ಕಾರವು ಅರ್ಚಕರ / ನೌಕರರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಕಲ್ಯಾಣ ಕಾರ್ಯಗಳನ್ನು / ಐತಿಹಾಸಿಕ ನಿರ್ಣಯಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಜಾರಿಗೊಳಿಸಿದೆ.
ಶ್ರೀಮಂತ ದೇವಸ್ಥಾನಗಳ ಸಂಗ್ರಹಣಾ ನಿಧಿಯಿಂದ ‘C’ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿ ಮಾಡುವುದೇ ತಪ್ಪೇ? ಈ ಯೋಜನೆಗಳ ಫಲಾನುಭವಿಗಳು ಸಮಸ್ತ ಅರ್ಚಕ / ನೌಕರರ ಸಮೂಹ ಹಾಗೂ ಅವರ ಕುಟುಂಬವಾಗಿರುವುದು ಸುಳ್ಳೇ?
ದೇವಸ್ಥಾನಗಳ ಅರ್ಚಕರ/ ನೌಕರರ ಕುಟುಂಬಕ್ಕೂ ಎಲ್ಲ ರೀತಿಯ ಸೌಲಭ್ಯ ಸಿಗುವಂತಾಗಲಿ ಎಂಬ ಆಶಯಕ್ಕೆ ವಿರೋಧ ವ್ಯಕ್ತಪಡಿಸುವುದು ಅಕ್ಷಮ್ಯವಲ್ಲವೇ?
ಬಿ.ಜೆ.ಪಿಯ ಕಾಲದಲ್ಲಿ ಸಂಗ್ರಹಣಾ ನಿಧಿಯ ಉದ್ದೇಶ ಈ ಸರ್ಕಾರದ ಅವಧಿಯಲ್ಲಿ ಬದಲಾವಣೆಯಾಗುತ್ತದೆಯೇ?? ಖಾಯಿದೆ ಎಲ್ಲಾ ಕಾಲಕ್ಕೂ ಸಲ್ಲುವಂತಹದ್ದು ಎಂಬ ಸಾಮಾನ್ಯ ಜ್ಞಾನ ಇರಬೇಡವೇ?
ದೇವಸ್ಥಾನಗಳ ಅಭಿವೃದ್ದಿ, ಅರ್ಚಕರು ಹಾಗೂ ನೌಕರ ಸಮೂಹದ ಶ್ರೇಯೋಭಿವೃದ್ಧಿಗಾಗಿ ಈ ಕಾರ್ಯವಾಗಬೇಕು. ಭಾವನೆಯೊಂದಿಗಿನ ಬದುಕನ್ನು ಕಲ್ಪಿಸುವ ಕಾರ್ಯ ವಾಗಬೇಕು. ಈ ರೀತಿಯ ವಿರೋಧಗಳಿಗೆ ಸರ್ಕಾರ ಮಣಿಯಬಾರದು. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಬೇಕು. ಅಷ್ಟೇ ಅಲ್ಲ, ಮತ್ತಷ್ಟು ಸುಧಾರಣಾ ಕ್ರಮಗಳಿಗೆ ಸರ್ಕಾರ ಮುನ್ನುಡಿ ಬರೆಯಬೇಕು.