ಮಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುಕೊಲೆ ಪ್ರಕರಣದಲ್ಲಿ 6ನೇ ಆರೋಪಿ ಮಹಮ್ಮದ್ ಶರೀಫ್’ನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಕೋಡಾಜೆ ನಿವಾಸಿ 55 ವರ್ಷದ ಮಹಮ್ಮದ್ ಶರೀಫ್ ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2022 ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಹಲವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಮುಖ ಆರೋಪಿಗಳಲ್ಲೊಬ್ಬನಾದ ಮಹಮ್ಮದ್ ಶರೀಫ್ ತಲೆಮರೆಸಿಕೊಂಡಿದ್ದ. PFI ಮುಖಂಡರಲ್ಲೊಬ್ಬನಾಗಿದ್ದಾನೆ ಎನ್ನಲಾದ ಆತನ ಪತ್ತೆಗಾಗಿ ಎನ್ಐಎ 5 ಲಕ್ಷ ರೂ ಬಹುಮಾನ ಘೋಷಿಸಿತ್ತು. ಇದೀಗ ಶರೀಫ್ ಬಂಧನವಾಗಿದ್ದು, ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.


























































