ಬೆಂಗಳೂರು: ಈ ದೇಶದಲ್ಲಿ ಯಾವುದೇ ಮಹಿಳೆಯ ಮೇಲೆ ಶೋಷಣೆ ನಡೆದರೂ ಪ್ರಧಾನಿ ಮೋದಿ ಅವರು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಾರೆ. ಹಾಗೂ 500 ಮೀ ದೂರ ನಿಲ್ಲುತ್ತಾರೆ. ಮಹಿಳೆಯರು ಅತ್ತು ಕರೆದರೂ ಅವರಿಗೆ ಕೇಳಿಸುವುದಿಲ್ಲ ಎಂದು ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನಾಟೆ ಹೇಳಿದ್ದಾರೆ.
ಈ ಫೋಟೊದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣ, ಇವರು ಹಾಸನದ ಸಂಸದ ಮತ್ತು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ.
ಕಳೆದ 15 ದಿನಗಳ ಮೊದಲು ನರೇಂದ್ರ ಮೋದಿಯವರು ಪ್ರಜ್ವಲ್ ರೇವಣ್ಣ ಜೊತೆ ವೇದಿಕೆ ಹಂಚಿಕೊಂಡರು. ಅವರನ್ನು ಹೊಗಳಿದರು, ಬೆನ್ನು ತಟ್ಟಿದರು ಮತ್ತು ಅವರ ಪರವಾಗಿ ಮತ ಯಾಚಿಸಿದರು.
ಈ ಹಿಂದೆ ದೆಹಲಿಯಲ್ಲೂ… pic.twitter.com/8ceBHtxmF0
— Karnataka Congress (@INCKarnataka) May 1, 2024
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ದೇಶದ ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆಯ 15 ದಿನ ಮೊದಲು ಪ್ರಜ್ವಲ್ ರೇವಣ್ಣ ಪರವಾಗಿ ಮತ ಕೇಳುತ್ತಾರೆ. ಒಂದೇ ವೇದಿಕೆಯನ್ನು ಹಂಚಿಕೊಂಡು ನಿಂತಿದ್ದಾರೆ. ಮೋದಿ ಅವರು ಇದೇ ಮೊದಲ ಬಾರಿಗೆ ಆರೋಪಿಯನ್ನು ಭೇಟಿ ಮಾಡುವುದಿಲ್ಲ. ಮೈತ್ರಿ ಮಾತುಕತೆ ವೇಳೆ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ ಎಂದರು.
ರಾಕ್ಷಸೀ ಕೃತ್ಯ ಎಸಗಿರುವ ಪ್ರಜ್ವಲ್ ರೇವಣ್ಣ ಅವರು ಮೋದಿ ಪರಿವಾರದ ವ್ಯಕ್ತಿ. ಈತ ಎಸಗಿರುವ ಕೃತ್ಯ ನೋಡಿದರೆ ಆಘಾತವಾಗುತ್ತದೆ. ತಾನು ಸಾವಿರಾರು ಮಹಿಳೆಯರ ಮೇಲೆ ಎಸಗಿರುವ ಕೃತ್ಯವನ್ನು ತಾನೇ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ ದೇಶದ ದೊಡ್ಡ ಅತ್ಯಾಚಾರ ಪ್ರಕರಣ ಎಂದ ಅವರು, ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೇಲವೇ ಗಂಟೆಗಳಲ್ಲಿ ಎಸ್ ಐಟಿ ರಚನೆ ಮಾಡಿತು. ಈಗಾಗಲೇ ಎಸ್ ಐಟಿ ಆರೋಪಿಯ ತಂದೆ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ. ಆದರೆ ಈತ ಯಾರಿಗೂ ತಿಳಿಯದಂತೆ ದೇಶ ಬಿಟ್ಟು ಹೋಗಿದ್ದು ಹೇಗೆ? ಎಸ್ ಐಟಿ ರಚನೆ ಆಗುತ್ತದೆ ಎಂದು ತಿಳಿದು ಕೆಲವೇ ಗಂಟೆಗಳಲ್ಲಿ ತಪ್ಪಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದರು.
ಪ್ರಿಯಾಂಕ ಗಾಂಧಿ ಮಗಳನ್ನು ನೋಡಲು ಹೋಗುವುದು ಬಿಜೆಪಿ ನಾಯಕರಿಗೆ ಗೊತ್ತಾಗುತ್ತದೆ. ಆದರೆ ಇಷ್ಟು ದೊಡ್ಡ ಆರೋಪಿ ತಪ್ಪಿಸಿಕೊಂಡು ಹೋಗುವುದು ಗೊತ್ತಾಗುದಿಲ್ಲವೇ? ಎಂದು ಪ್ರಶ್ನೆ ಮಾಡಿದ ಸುಪ್ರಿಯಾ ಶ್ರಿನಾಟೆ, ಪ್ರಧಾನಿ ಮೋದಿಯವರಿಗೆ ಈಗ ಮಾಡಿದ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಮೊದಲೇ ಗೊತ್ತಿತ್ತು. ಈತ ಎಂತವನು ಎಂಬುದು ಮೋದಿಯವರಿಗೆ ಗೊತ್ತಿತ್ತು. ಏಕೆಂದರೆ ಬಿಜೆಪಿ ನಾಯಕ ದೇವರಾಜೇಗೌಡ 2023 ಡಿಸೆಂಬರ್ ತಿಂಗಳಲ್ಲೇ ಮೋದಿ, ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಇಬ್ಬರಿಗೂ ಪತ್ರ ಬರೆದಿದ್ದರು, ಈ- ಮೇಲ್ ಮಾಡಿದ್ದರು. 2024 ಜನವರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಮೈತ್ರಿ ಬೇಡ ಎಂದು ಎಲ್ಲಾ ಸಾಕ್ಷಿಗಳನ್ನು ನೀಡಿದ್ದರು ಎಂದರು.
ಈ ನೀಚ ವ್ಯಕ್ತಿ ಮನೆಗೆಲಸದವರು, ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇಷ್ಟೆಲ್ಲಾ ಗೊತ್ತಿದ್ದರೂ ಮೈಸೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈತನ ಕೈ ಹಿಡಿಯುತ್ತಾರೆ. ನಾಚಿಕೆಯಾಗಬೇಕು ಎಂದವರು ತರಾಟೆಗೆ ತೆಗೆದುಕೊಂಡರು.
ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾಂಗ್ರೆಸ್ ನಾಯಕರಿಗೆ ಪೆನ್ ಡ್ರೈವ್ ನೀಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಅಪ್ಪಟ ಸುಳ್ಳು ಹಾಗೂ ಆಧಾರರಹಿತ ಆರೋಪ. ಈತ ಹಂಚಿಕೊಂಡಿರುವುದು ಬಿಜೆಪಿ ನಾಯಕರಿಗೆ. ಇಂತಹ ಪಾಪದ ಕೃತ್ಯಗಳ ಬಗ್ಗೆ ಗೊತ್ತಿದ್ದರೂ ನಿರ್ಲಜ್ಜ ಬಿಜೆಪಿ ನಾಯಕರು ಇನ್ನೂ ಸುಳ್ಳು ಹೇಳುತ್ತಿದ್ದಾರೆ. ಇಂತಹ ಜಾನುವಾರು ಗುಣದ, ರಾಕ್ಷಸನನ್ನು ಇನ್ನೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರಿಯಾ ಶ್ರಿನಾಟೆ ದೂರಿದರು.