ಬೆಂಗಳೂರು: ಕಳೆದ ವರ್ಷ ಬಲವಂತವಾಗಿ ಜಾರಿಗೆ ತಂದ ಐದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಮತ್ತು ಹಲವು ರಾಜ್ಯಗಳಲ್ಲಿ ರೈತರ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ವಿದ್ಯುತ್ ಕಾಯ್ದೆ (ತಿದ್ದುಪಡಿ)-2020ನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವುದು ಜನದ್ರೋಹದ ಪರಮಾವಧಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ವಿದ್ಯುತ್ ಕಾಯ್ದೆ ತಿದ್ದುಪಡಿಯಲ್ಲಿ ಹಲವು ಅನಾಹುತಕಾರಿ ಸಂಗತಿಗಳಿವೆ ಎಂದವರು ಬೊಟ್ಟುಮಾಡಿದ್ದಾರೆ.
- ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ವಿತರಣೆಗಳನ್ನು ಖಾಸಗಿಯವರಿಗೆ ವಹಿಸಿ
ಅವರ ಲಾಭಕ್ಕಾಗಿ ಸೆಕ್ಷನ್ 3 ರ ಪ್ರಕಾರ ‘ಎಲೆಕ್ಟ್ರಿಸಿಟಿ ಕಾಂಟ್ರಾಕ್ಟ್ ಎನ್ ಫೊರ್ಸ್ಮೆಂಟ್ ಅಥಾರಿಟಿ’ ಯನ್ನು ಜಾರಿಗೆ ತರಲಾಗುತ್ತದೆ. - ಸೆಕ್ಷನ್ 7 ರ ಪ್ರಕಾರ ಹಣ ಕೊಡದೆ, ಭದ್ರತೆ ನೀಡದೆ ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜು ಮಾಡಬಾರದೆಂದು ಈ ಕಾಯ್ದೆ ಹೇಳುತ್ತದೆ.
- ಸೆಕ್ಷನ್ 12 ರ ಪ್ರಕಾರ ಸಬ್ಸಿಡಿಗಳನ್ನು ಕಡಿತಮಾಡಬೇಕೆಂದು ಹೇಳುತ್ತದೆ.
- ಸೆಕ್ಷನ್ 5 ರ ಪ್ರಕಾರ ವಿದ್ಯುತ್ ಸರಬರಾಜುದಾರರು ರಾಜ್ಯಗಳ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳುತ್ತದೆ.
- ಪ್ರತಿಯೊಬ್ಬರ ಮನೆಗೂ ಭಾಗ್ಯಜ್ಯೋತಿ, ಕುಟೀರ ಜ್ಯೋತಿ (ಮನೆಗಳಿಗೂ ಸೇರಿ), ಪ್ರತಿಯೊಬ್ಬ ರೈತರ ಪಂಪ್ ಸೆಟ್ಟಿಗೂ, ಪ್ರತಿಯೊಬ್ಬ ನೇಕಾರರ ಮಗ್ಗಗಳಿಗೂ, ಎಲ್ಲ ವೃತ್ತಿಗಳವರಿಗೂ ಸುಮಾರು 22.5 ಕೋಟಿ ಪ್ರೀಪೇಡ್ ಸ್ಮಾರ್ಟ್ ಮೀಟರುಗಳನ್ನು ಅಳವಡಿಸುತ್ತಾರೆ. ಮೊಬೈಲುಗಳನ್ನು ರೀಚಾರ್ಜ್ ಮಾಡಿದ ಹಾಗೆ ಬಳಕೆಗೆ ಮೊದಲೆ ಹಣ ಕಟ್ಟಬೇಕು. ಕರೆನ್ಸಿ ಇರುವವರೆಗೆ ವಿದ್ಯುತ್ ಸರಬರಾಜಾಗುತ್ತದೆ. ಮುಗಿದ ತಕ್ಷಣ ವಿದ್ಯುತ್ ಡಿಸ್ ಕನೆಕ್ಟ್ ಆಗುತ್ತದೆ. ಸಂಪೂರ್ಣ ಕ್ರಾಸ್ ಸಬ್ಸಿಡಿಗಳನ್ನು ನಿಲ್ಲಿಸಲಾಗುತ್ತದೆ.
ದೇಶದ ವಿದ್ಯುತ್ ಸರಬರಾಜು ಕಂಪೆನಿಗಳು ಸುಮಾರು 4.5 ಲಕ್ಷ ಕೋಟಿ ರೂಗಳಷ್ಟು ನಷ್ಟದಲ್ಲಿವೆ. ಹಾಗಾಗಿ ವಿದ್ಯುತ್ ಇಲಾಖೆಗಳ ನಿರ್ವಹಣೆಯನ್ನು ಸರ್ಕಾರ ಮಾಡಲಾಗದು ಎನ್ನುವ ಸುಳ್ಳು ಕಾರಣ ಮುಂದಿಟ್ಟು ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದೆ ಎಂದೂ ಸಿದ್ದರಾಮಯ್ಯ ದೂರಿದರು.
ಪವರ್ ಗ್ರಿಡ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನಂತಹ ಸರ್ಕಾರಿ ಸರಬರಾಜು
ಕಂಪೆನಿಗಳು ದೊಡ್ಡ ಲಾಭದಲ್ಲಿದ್ದು ಬೃಹತ್ ಬಂಡವಾಳ ಹೊಂದಿವೆ. ಇಂದು ವಿದ್ಯುತ್ ಉತ್ಪಾದನೆಗೂ ಕೊರತೆ ಇಲ್ಲ. ಉತ್ಪಾದನಾ ಕಂಪನಿಗಳೂ ದೊಡ್ಡ ಮಟ್ಟದ ಲಾಭ ಮಾಡುತ್ತಿವೆ ಎಂದವರು ದೂರಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಸರ್ಕಾರ ಒಂದು ಯೂನಿಟ್ ಸೋಲಾರ್
ಉತ್ಪಾದಿಸಲು 15 ರೂಪಾಯಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ, ಸೋಲಾರ್ ಉತ್ಪಾದಕರು 2 ರೂಪಾಯಿ ಆಸುಪಾಸಿಗೆ ಒಂದು ಯೂನಿಟ್ಟನ್ನು ಮಾರಲು ತಯಾರಿದ್ದಾರೆ. ಇದರಲ್ಲೂ ಅವರಿಗೆ ಲಾಭ ಸಿಗುತ್ತಿದೆ ಎಂಬುದು ಅವರ ವಿಶ್ಲೇಷಣೆ.
ವಿತರಣಾ ಕಂಪೆನಿಗಳು ಜನರೊಂದಿಗೆ ನೇರ ವ್ಯವಹಾರದಲ್ಲಿರುತ್ತವೆ. ಸಮಸ್ಯೆ ಇರುವುದೇ ಇಲ್ಲಿ. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಬಾರದು ಅವರನ್ನು ಸಾಧ್ಯವಾದಷ್ಟು ಕಬ್ಬಿನ ಹಾಗೆ ಹಿಂಡಿ ಹಣ ವಸೂಲಿ ಮಾಡಿಕೊಳ್ಳಬೇಕು ಎಂಬುದು ಅವರ ಮೂಲ ಉದ್ದೇಶ.
ಇದೇ ವೇಳೆ, ಮೇಲ್ನೋಟಕ್ಕೆ ನಷ್ಟವಾಗುತ್ತಿದೆ ಎನ್ನುವುದಕ್ಕೆ ಕಾರಣವೇನು ಗೊತ್ತೆ? ದೇಶದ ಡಿಸ್ಕಾಂಗಳು ಮತ್ತು ಸರಬರಾಜು ಕಂಪೆನಿಗಳು ಮೂಲಭೂತ ಸೌಕರ್ಯಗಳಿಗಾಗಿ ಕಳೆದ ಹತ್ತು ವರ್ಷಗಳಲ್ಲಿ ವಿಪರೀತ ಹೂಡಿಕೆ ಮಾಡಿವೆ. ದೇಶದ ಉದ್ಧಗಲಕ್ಕೂ ವಿದ್ಯುತ್ ಕಾರಿಡಾರುಗಳನ್ನು, ವಿದ್ಯುತ್ ಲೈನುಗಳನ್ನು ನಿರ್ಮಿಸಲಾಗಿದೆ. ಈ ಹೂಡಿಕೆ ತಕ್ಷಣಕ್ಕೆ ನಷ್ಟ ಎಂದು ಕಾಣಿಸುತ್ತದೆ. ಹೂಡಿಕೆ ಕಡಿಮೆಯಾದಂತೆ ಲಾಭದ ಪ್ರಮಾಣ ಹೆಚ್ಚುತ್ತದೆ ಎಂಬುದು ಸಿದ್ದರಾಮಯ್ಯ ಅವರ ವಾದ.
ವಿದ್ಯುತ್ ಉತ್ಪಾದನ ವೆಚ್ಚ ಹೆಚ್ಚಲು ಮುಖ್ಯ ಕಾರಣ 2010 ರಲ್ಲಿ ಪ್ರತಿ ಟನ್ ಕಲ್ಲಿದ್ದಲಿಗೆ ಇದ್ದ 50 ರೂ ಶುಲ್ಕವನ್ನು 2016 ರ ಮಾರ್ಚ್ 1 ರಿಂದ ಪ್ರತಿ ಟನ್ ಗೆ 400 ರೂ ಗೆ ಏರಿಸಿರುವುದು. ಕಲ್ಲಿದ್ದಲಿನ ಸಾಗಣೆ, ತೆರಿಗೆ ಶುಲ್ಕ ಇತ್ಯಾದಿಗಳೆಲ್ಲ ಮೋದಿಯವರ ಕಾಲದಲ್ಲಿ ಶೇ. 340 ರಷ್ಟು ಹೆಚ್ಚಾಗಿವೆ. ಆದ್ದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಮೋದಿಯವರಿಗೆ ಮನಸ್ಸಿದ್ದರೆ ಮೊದಲು ಈ ದರಗಳನ್ನು ಕಡಿಮೆ ಮಾಡಬೇಕು ಎಂದವರು ಹೇಳಿದ್ದಾರೆ.
ಅದಾನಿ ಮುಂತಾದವರು ಕಲ್ಲಿದ್ದಲು ಬಳಸಿ ಉಷ್ಣ ವಿದ್ಯುತ್ ಉತ್ಪಾದಿಸುವ ಅನೇಕ ಕಂಪೆನಿಗಳನ್ನು ಹೊಂದಿದ್ದು ಈತ ರಾಜ್ಯ ಸರ್ಕಾರಗಳೊಂದಿಗೆ ಮಾಡಿಕೊಂಡಿರುವ ಖರೀದಿ ಒಪ್ಪಂದಗಳ ಅವಧಿ ಮುಗಿದು ಹೋಗುತ್ತಿವೆ. ಜೊತೆಗೆ ಇವರು ಆಸ್ಟ್ರೇಲಿಯ ಮುಂತಾದ ಕಡೆ ಕಲ್ಲಿದ್ದಲು ಗಣಿಗಳನ್ನು ಖರೀದಿಸಿಟ್ಟಿದ್ದಾರೆ. ಕರ್ನಾಟಕವೂ ಸೇರಿದಂತೆ ರಾಜ್ಯ ಸರ್ಕಾರಗಳು ಯಥೇಚ್ಛವಾಗಿ ಸೋಲಾರ್ ಮತ್ತು ವಿಂಡ್ ಪವರ್ ಸ್ಥಾವರಗಳನ್ನು ಸ್ಥಾಪಿಸುತ್ತಿವೆ. ಇವುಗಳಿಂದಾಗಿ ಅಗ್ಗದ ದರದಲ್ಲಿ ವಿದ್ಯುತ್ ಲಭ್ಯವಾಗುತ್ತಿದೆ ಮತ್ತು ಪರಿಸರಕ್ಕೆ ಕಾರ್ಬನ್ ಡೈ ಆಕ್ಸೈಡ್ ಸೇರುವುದೂ ತಪ್ಪುತ್ತದೆ. ಇದೆಲ್ಲದರಿಂದ ಬೆಚ್ಚಿ ಕೂತಿರುವ ಅಂಬಾನಿ ಮುಂತಾದವರು ವಿದ್ಯುತ್ ಉತ್ಪಾದನೆ ಮತ್ತು ವಿತರಣೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ. ಇವರ ತಾಳಕ್ಕೆ ಬಿಜೆಪಿ ಸರ್ಕಾರಗಳು ಕುಣಿಯುತ್ತಿವೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಕರ್ನಾಟಕದ ಉಡುಪಿಯಲ್ಲಿ ಅದಾನಿ ಯುಪಿಸಿಎಲ್ ಎಂಬ ಉಷ್ಣ ವಿದ್ಯುತ್ ಕಂಪೆನಿಯನ್ನು ಹೊಂದಿದ್ದಾರೆ. ಈ ಕಂಪೆನಿಯಿಂದ 1080 ಮೆ. ವ್ಯಾಟ್ ವಿದ್ಯುತ್ ಖರೀದಿಸಲು ಒಡಂಬಡಿಕೆಯಾಗಿದೆ. ಈ ಕಂಪೆನಿಗೆ 2019-20 ರಲ್ಲಿ 1092 ಕೋಟಿ ರೂಗಳನ್ನು ಪಾವತಿಸಲಾಗಿದೆ. ಆದರೆ ನಮ್ಮ ರಾಜ್ಯವು ಈ ಕಂಪೆನಿಯಿಂದ ವಿದ್ಯುತ್ ಪಡೆದು ಪಾವತಿಸಬೇಕಾದ್ದಕ್ಕಿಂತ 505 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒಂದು ವರ್ಷದಲ್ಲಿ ಅಧಿಕಾರಿಗಳು ಪಾವತಿಸಿದ್ದಾರೆ. ಅವರು ಪ್ರತಿ ತಿಂಗಳೂ ಬೆಲೆ ಏರಿಕೆಯಲ್ಲಿ ವ್ಯತ್ಯಾಸ ಮಾಡುತ್ತಿದ್ದರೂ ಅದನ್ನು ಪ್ರಶ್ನಿಸದೆ ಅಧಿಕಾರಿಗಳು ಬಾಯಿ ಮುಚ್ಚಿಕೊಂಡು ಪಾವತಿಸುತ್ತಿದ್ದಾರೆ. ಈ ಕುರಿತು ಜಂಟಿ ಸದನ ಸಮಿತಿ ರಚಿಸಬೇಕೆಂದು ಒತ್ತಾಯಿಸಿದ್ದೆ. ಈಗ ಅದೇ ಜಿಲ್ಲೆಯ ಶಾಸಕರಿಗೆ ಇಂಧನ ಇಲಾಖೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಮೋದಿಯವರು ಈ ಕಾಯ್ದೆಯನ್ನು ಜಾರಿಗೆ ತಂದರೆ ಏನಾಗುತ್ತದೆ ಎಂಬ ಬಗ್ಗೆಯೂ ಸಿದ್ದರಾಮಯ್ಯ ಕೆಲವು ಸಂಗತಿಗಳನ್ನು ಮುಂದಿಟ್ಟಿದ್ದಾರೆ.
- ನಮ್ಮ ಸಂವಿಧಾನದ 7 ನೇ ಅನುಸೂಚಿಯ ಪ್ರಕಾರ ವಿದ್ಯುಚ್ಛಕ್ತಿಯು ಸಮವರ್ತಿ ಪಟ್ಟಿಯಲ್ಲಿದ್ದು ರಾಜ್ಯಗಳ ಮೇಲೆ ಕೇಂದ್ರವು ಸವಾರಿ ಮಾಡುವಂತಿಲ್ಲ.
- ಈ ಕಾಯ್ದೆ ಜಾರಿಗೊಂಡರೆ ರೈತರು, ಬಡವರು, ಮಧ್ಯಮವರ್ಗದವರು, ಕುಶಲಕರ್ಮಿಗಳು, ನೇಕಾರರು, ಗುಡಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳವರು ಸಂಪೂರ್ಣ ನಾಶವಾಗುತ್ತಾರೆ.
- ಉಚಿತ ಮತ್ತು ರಿಯಾಯಿತಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದವರು ದೇಶದ ಅಭಿವೃದ್ಧಿಗೆ ಬೃಹತ್ ಕೊಡುಗೆಯನ್ನು ಕೊಡುತ್ತಾ ಬಂದಿದ್ದಾರೆ. ಅವರ ಮೇಲೆ ಬೆಲೆ ಏರಿಕೆಯ ಒತ್ತಡ ಬೀಳುತ್ತದೆ.
- ವಿದ್ಯುತ್ ಬೆಲೆಗಳನ್ನು ಕಾರ್ಪೊರೇಟ್ ಬಂಡವಾಳಿಗರು ನಿರ್ಧರಿಸುವುದರಿಂದ ಜನರು ಕುಡಿಯುವ ನೀರು, ಆಹಾರ ಪದಾರ್ಥಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತವೆ.
- ದೇಶದ ವಿದ್ಯುತ್ ವಲಯದಲ್ಲಿ 25 ಲಕ್ಷ ನೌಕರರು ಕೆಲಸ ಮಾಡುತ್ತಿದ್ದು ಇವರಲ್ಲಿ ಬಹುಪಾಲು ಜನ ಉದ್ಯೋಗ ಕಳೆದುಕೊಳ್ಳುತ್ತಾರೆ.
- ಮೋದಿಯವರು ರೈತರಿಗೆ ನೀವು ಬಳಕೆ ಮಾಡುತ್ತಿರುವ ವಿದ್ಯುತ್ತಿಗೆ ಮೀಟರ್ ಹಾಕಿಸಿಕೊಳ್ಳಿ, ಹಣ ಕಟ್ಟಿ ಛಾರ್ಜ್ ಮಾಡಿಸಿಕೊಳ್ಳಿ ನಂತರ ನಾವು ನಿಮ್ಮ ಅಕೌಂಟಿಗೆ ನೇರವಾಗಿ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
- ಮೋದಿಯವರ ಸಬ್ಸಿಡಿ ನೀತಿಯ ಹಿಂದಿನ ಕುತಂತ್ರ ಏನು ಎಂಬುದು ದೇಶದ ಜನರಿಗೆ ಈಗಾಗಲೆ ಅರ್ಥವಾಗಿದೆ. ಅಡುಗೆ ಗ್ಯಾಸ್ ಸಿಲಿಂಡರ್ ವಿಚಾರದಲ್ಲೂ ಹೀಗೆ ಹೇಳಿದ್ದರು. ಸ್ವಲ್ಪ ಕಾಲ ನೂರಿನ್ನೂರು ರೂಪಾಯಿಗಳನ್ನು ಜನರ ಅಕೌಂಟಿಗೆ ಹಾಕಿದರು. 2019 ರಿಂದ ಇಡೀ ಸಬ್ಸಿಡಿಯನ್ನೆ ನಿಲ್ಲಿಸಿಬಿಟ್ಟರು. ಈಗ ವಿದ್ಯುತ್ ವಿಚಾರದಲ್ಲೂ ಹಾಗೆ ಮಾಡುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಹಾಗಿದ್ದರೆ ಏನು ಮಾಡಬೇಕು?
1. ಕರ್ನಾಟಕದಲ್ಲಿ 20 ಸಾವಿರ ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಲಭ್ಯವಿದೆ. ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್‌ನಲ್ಲಿ ಶೇ.26-29 ರಷ್ಟು ಬಳಕೆಯಾಗುತ್ತಿದೆ. ಉಳಿದ ವಿದ್ಯುತ್ ಅನ್ನು ಯಾಕೆ ಮಾರುತ್ತಿಲ್ಲ?
2. ಕರ್ನಾಟಕವು ಕೇಂದ್ರ ಸರ್ಕಾರದ ಸೆಂಟ್ರಲ್ ಗ್ರಿಡ್‌ನಿಂದ ಖರೀದಿಸುತ್ತಿರುವ 5514 ಮೆ.ವ್ಯಾಟ್ ನಲ್ಲಿ ಬಳಕೆ ಮಾಡುತ್ತಿರುವುದು ಅರ್ಧದಷ್ಟು ಮಾತ್ರ. ಹೀಗಾಗಿ ನಾವು ಪಾವತಿಸಬೇಕಿರುವುದು 1787 ಕೋಟಿ ರೂ ಮಾತ್ರ. ಆದರೆ ನಾವು 4388 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಪಾವತಿಸುತ್ತಿದ್ದೇವೆ. ಅಂದರೆ 2601 ಕೋಟಿಗಳನ್ನು ಸುಖಾ ಸುಮ್ಮನೆ ನೀಡುತ್ತಿದ್ದೇವೆ.
3. ಒಪ್ಪಂದದ ಅವಧಿ ಮುಗಿದರೂ, ಮುಗಿಯುತ್ತಿದ್ದರೂ ಅದಾನಿ ಮುಂತಾದ ಕಂಪೆನಿಗಳಿಂದ ಖರೀದಿ ಮಾಡುವುದನ್ನು ನಿಲ್ಲಿಸಿದರೆ ಪ್ರತಿ ವರ್ಷ ಸುಮಾರು 7000 ಕೋಟಿ ರೂಗಳನ್ನು ಉಳಿಸಬಹುದು. ಈಗ ಅಗತ್ಯವಾಗಿ ಮಾಡಬೇಕಿರುವುದು ಸುಧಾರಣೆಯನ್ನೆ ಹೊರತು ದೇಶದ ವಿನಾಶವಲ್ಲ.
ಬಾಬಾ ಸಾಹೇಬ್ ಅಂಬೇಡ್ಕರರು ಸಂವಿಧಾನ ಸಭೆಯಲ್ಲಿ, “ವಿದ್ಯುತ್ ಅನ್ನು ಉಚಿತವಾಗಿ ರೈತರಿಗೆ ನೀಡಬೇಕು. ರೈತರು ತಮಗಾಗಿ ವಿದ್ಯುತ್ ಬಳಸುತ್ತಿಲ್ಲ. ದೇಶದ ಜನರ ಹೊಟ್ಟೆಗೆ ಅನ್ನ ಬೆಳೆದುಕೊಡುತ್ತಾರೆ” ಎಂದಿದ್ದರು.
ಇದನ್ನೇ ಕಲ್ಯಾಣ ರಾಷ್ಟ್ರ ನಿರ್ಮಾಣದ ಬುನಾದಿ ಎಂದು ಜವಾಹರ್ ಲಾಲ್ ನೆಹರೂ ಅವರು ಭಾವಿಸಿ ಉಚಿತ ವಿದ್ಯುತ್ ನೀಡುವ ತೀರ್ಮಾನ ತೆಗೆದುಕೊಂಡಿದ್ದರು. ಈಗ ಅದನ್ನೆಲ್ಲ ಗಾಳಿಗೆ ತೂರಲು ಹೊರಟಿದ್ದಾರೆ. ಯಾವ ಕಾರಣಕ್ಕೂ ಬಾಬಾ ಸಾಹೇಬರ ಮತ್ತು ನೆಹರೂ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಬಲವಂತವಾಗಿ ದೇಶದ ಮೇಲೆ ಹೇರಲು ಹೊರಟಿರುವ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ದೇಶವ್ಯಾಪಿ ರೈತರು ಮತ್ತು ವಿವಿಧ ಜನಸಮುದಾಯಗಳು ನಡೆಸುತ್ತಿರುವ ಹೋರಾಟವನ್ನು ಅರ್ಥಮಾಡಿಕೊಂಡು ಅವರೊಂದಿಗೆ ಪ್ರಜಾತಾಂತ್ರಿಕ ಸ್ಫೂರ್ತಿಯೊಂದಿಗೆ ನಡೆದುಕೊಳ್ಳಬೇಕು.
ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಮತ್ತು ಹಸಿರು ಶಾಲುಗಳನ್ನು ಹೆಗಲ ಮೇಲೆ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳು ಹಾಗೂ ರಾಜ್ಯ ಸರ್ಕಾರ ಕೂಡಲೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಮನೆಹಾಳು, ದುಷ್ಟ ಕಾಯ್ದೆಗಳನ್ನು ಜಾರಿಗೊಳಿಸದಂತೆ ಕ್ರಮವಹಿಸಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.