ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಿಜೆಪಿ ಸಂಸದೀಯ ಸಮಿತಿ ಸದಸ್ಯರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಂಧನಕ್ಕಾಗಿ ಬೆಂಗಳೂರಿನ ನ್ಯಾಯಾಲಯ ವಾರೆಂಟ್ ಹೊರಡಿಸಲು ಆದೇಶಿಸಿದೆ.
ಪೋಕ್ಸೋ ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧ ವಾರೆಂಟ್ ಜಾರಿಗೆ ಕೋರ್ಟ್ ಆದೇಶಿಸಿದೆ. ಸಿಐಡಿ ಮನವಿ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಮಾರ್ಚ್ ತಿಂಗಳಲ್ಲೇ ದೂರು ದಾಖಲು:
ತಮ್ಮ ಅಪ್ರಾಪ್ತ ಪುತ್ರಿಯೊಂದಿಗೆ ಬಿಎಸ್‌ವೈ ಅವರು ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಕಳೆದ ಮಾರ್ಚ್ ತಿಂಗಳಲ್ಲೇ ಮಹಿಳೆಯೊಬ್ಬರು ದೂರು ನೀಡಿದ್ದರು. ಆದರೆ ಈ ದೂರು ನೆನೆಗುದಿಗೆ ಬಿದ್ದಿದೆ ಎಂಬ ಆರೋಪ ಕೇಳಿಬಂದಿತ್ತು. ಕಳೆದ ತಿಂಗಳು ದೂರುದಾರ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೂ ಪ್ರಕರಣದ ತನಿಖೆಗೆ ವೇಗ ಸಿಕ್ಕಿಲ್ಲ ಎಂಬ ಬಗ್ಗೆ ಸಂತ್ರಸ್ತೆಯ ಸಹೋದರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಜೂನ್ 15ರೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸಿಐಡಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ, ಪೂರ್ವ ನಿರ್ಧರಿತ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿರುವುದರಿಂದ ಜೂನ್ 17ರಂದು ವಿಚಾರಣಗೆ ಹಾಜರಾಗುವುದಾಗಿ ಯಡಿಯೂರಪ್ಪ ಅವರು ಪೊಲೀಸರಿಗೆ ಪತ್ರ ಬರೆದಿದ್ದರು.
ಇನ್ನೊಂದೆಡೆ, ಪ್ರಕರಣ ರದ್ದತಿಗಾಗಿ ಕಾನೂನು ಸಮರ ಕೈಗೊಂಡಿರುವ ಯಡಿಯೂರಪ್ಪ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅದಾಗಲೇ ಬೆಂಗಳೂರು ನ್ಯಾಯಾಲಯ ಬಿಎಸ್‌ವೈ ಬಂಧನ ಸಂಬಂಧ ಪ್ರಕ್ರಿಯೆಗೆ ಆದೇಶಿಸಿದೆ.