ಮಂಗಳೂರು: ಮಂಗಳೂರು ಸಮೀಪದ ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜರೇಶ್ವರಿ ದೇವಾಲಯ ಇಂದು ಕನ್ನಡದ ರಂಗನ್ನು ಆವರಿಸಿಕೊಂಡಿದೆ.
ನಾಡಿನ ವಿವಿಧ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಪೂಜಾ ಕೈಂಕರ್ಯಗಳಿಂದ ಆಸ್ತಿಕರ ಗಮನಸೆಳೆಯುತ್ತಿರುವ ಪೊಳಲಿ ದೇವಾಲಯವು ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ಧ್ವಜದಲ್ಲಿರುವ ಬಣ್ಣಗಳ ಅಲಂಕಾರವನ್ನು ಆವರಿಸಿಕೊಂಡು, ಕರುನಾಡಿನ ಹಬ್ಬದ ಆಕರ್ಷಣೆಯನ್ನು ಪಡೆದಿದೆ.

ಜಗದ್ವಿಖ್ಯಾತ, ನಿತ್ಯ ಪೂಜಿತ ಬೃಹತ್ ಮೃಣ್ಮಯ ಮೂರ್ತಿಯನ್ನೊಳಗೊಂಡ ಅಧಿದೇವತೆ ಪೊಳಲಿಯ ಶ್ರೀ ರಾಜರಾಜೇಶ್ವರಿ. ಸುದೀರ್ಘ, ಒಂದು ತಿಂಗಳ ಕಾಲ ನಡೆಯವ ಜಾತ್ರಾ ಮಹೋತ್ಸವವು ಪೊಳಲಿಯದ್ದೇ ಆದ ವಿಶೇಷ. ಪುರಾಣದಲ್ಲಿರುವಂತೆ, ನಾಡಿಗೆ ಕಂಟಕವೆನಿಸಿದ್ದ ರಾಕ್ಷಸರನ್ಬು ವಧೆ ಮಾಡಿ ಅವರ ರುಂಡ ಚೆಂಡಾಡಿದ ದೇವತೆ ನೆಲೆಸಿರುವ ನಾಡು ಇದು ಎಂಬುದು ಆಸ್ತಿಕರ ನಂಬಿಕೆ. ಈ ಪುರಾಣ ಪ್ರಸಂಗವನ್ನು ಸ್ಮರಿಸುವ ಸನ್ನಿವೇಶದಂತೆ ‘ಚೆಂಡು ಉತ್ಸವ’ವು ಪ್ರತೀ ವರ್ಷ ಎಪ್ರಿಲ್ ತಿಂಗಳಲ್ಲಿ ಪೊಳಲಿ ಜಾತ್ರೆಯ ಅಂತಿಮ ದಿನಗಳಲ್ಲಿ ನಡೆಯುತ್ತವೆ. ಇದೀಗ ಈ ಕ್ಷೇತ್ರವು ರಾಜ್ಯೋತ್ಸವ ಸಂದರ್ಭದಲ್ಲಿ ಮತ್ತೊಮ್ಮೆ ಜನರ ಗಮನ ಕೇಂದ್ರೀಕರಿಸಿದೆ.

ಇಂದಿನ ಈ ವಿಶೇಷ ಅಲಂಕಾರಕ್ಕೂ ರಾಜ್ಯೋತ್ಸವಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ವಿಶೇಷ ಕೈಂಕರ್ಯದ ಉದ್ದೇಶದಿಂದ ಭಕ್ತರೊಬ್ಬರು ಇಡೀ ದೇವಾಲಯವನ್ನು ಹೂವುಗಳಿಂದ ಅಲಂಕರಿಸಿದ್ದಾರೆ. ಮೈಸೂರು ಮೂಲದ ಭಕ್ತರು ಪೊಳಲಿ ಶ್ರೀ ಕ್ಷೇತ್ರದಲ್ಲಿ ಮಹಾ ಗಾಯತ್ರಿ ಪೂಜೆಯ ಹರಕೆಯ ಪೂಜೆ ಹಮ್ಮಿಕೊಂಡಿದ್ದಾರೆ. ಈ ಪೂಜೆಯ ಹಿನ್ನೆಲೆಯಲ್ಲಿ ದೇವಾಲಯವನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೂವುಗಳಿಂದ ಸಿಂಗರಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರುನಾಡು ತುಂಬೆಲ್ಲಾ ಕನ್ನಡ ಧ್ವಜ ರಾರಾಜಿಸುತ್ತಿದೆ. ಬಹುತೇಕ ಕಡೆ ಕನ್ನಡದ ಬಣ್ಣಗಳ ಅಲಂಕಾರವೂ ಕಂಡುಬಂದಿದೆ. ಅದೇ ಸಂದರ್ಭದಲ್ಲಿ, ಕಾಕತಾಳೀಯವೆಂಬಂತೆ ರಾಜ್ಯೋತ್ಸವ ದಿನದಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದ ಅಲಂಕಾರವೂ ಕನ್ನಡ ಧ್ವಜದ ಬಣ್ಣಗಳನ್ನೊಳಗೊಂಡ ಹೂವುಗಳಿಂದ ಸಿಂಗಾರಗೊಂಡಿದ್ದರಿಂದ ‘ಕನ್ನಡ ಹಬ್ಬ’ದ ಆಕರ್ಷಣೆ ಪಡೆದಿದೆ. ಈ ವಿಷೇಷ ಅಲಂಕಾರವು ಭಕ್ತರ ಕುತೂಹಲದ ಕೇಂದ್ರಬಿಂದುವಾಗಿದೆ.

























































