ಬೆಂಗಳೂರು: ರಾಜ್ಯದಲ್ಲಿ ಹಂದಿಗಳಿಗೂ ಇದೆ ಹಂದಿಗಳ ಫೈವ್ ಸ್ಟಾರ್ ಸರ್ಕಾರಿ ಶಾಲೆ. ಹೀಗೆನ್ನುತ್ತಿದೆ ಪ್ರತಿಪಕ್ಷ ಬಿಜೆಪಿ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದ ಸರ್ಕಾರಿ ಶಾಲೆಯಾ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ. ಆ ಶಾಲೆ ಶಿಥಿಲಾವಸ್ಥೆ ತಲುಪಿದ್ದರೂ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಶಾಲೆ ಬೀಳುವ ಹಂತದಲ್ಲಿರುವುದರಂದಾಗಿ ಮಕ್ಕಳಿಗೆ ಕಟ್ಟಡ ಹೊರಗೆ ಪಾಠ ಮಾಡಲಾಗುತ್ತಿದೆ. ಖಾಲಿ ಇರುವ ಶಾಲಾ ಕಟ್ಟಡದಲ್ಲಿ ಹಂದಿ, ನಾಯಿಗಳು ಬಿಂದಾಸ್ ಆಗಿ ಸುತ್ತಾಡುತಿವೆ.
ಈ ಅವ್ಯವಸ್ಥೆಯ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ, ‘ಶಾಲೆ ಒಳಗೆ ಹಂದಿಗಳು ಬಿಂದಾಸ್! ಶಾಲೆ ಹೊರಗೆ ಮಕ್ಕಳ ಕಠಿಣ ಅಭ್ಯಾಸ!’ ಎಂದು ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ‘ಹಂದಿಗಳಿಗೂ ಫೈವ್ ಸ್ಟಾರ್ ಸರ್ಕಾರಿ ಶಾಲೆ’ ಇದೆ ಎಂದು ಬಿಜೆಪಿ ಟೀಕಿಸಿದೆ.
ಶಿಕ್ಷಣ ಇಲಾಖೆಯು ಸಚಿವ ಮಧು ಬಂಗಾರಪ್ಪ ಅವರ ಕೈ ಸೇರುತ್ತಿದ್ದಂತೆ ಬರ್ಬಾದ್ ಆಗಿದೆ. ಶಾಲೆಗಳು ಮೂಲಸೌಕರ್ಯವಿಲ್ಲದೆ ಮಕ್ಕಳು ತರಗತಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪೋಷಕರು ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಭಯ ಬೀಳುತ್ತಿದ್ದಾರೆ ಎಂದು ಪರಿಸ್ಥಿತಿಯನ್ನು ವ್ಯಾಖ್ಯಾನಿಸಿರುವ ಬಿಜೆಪಿ, ಯಾದಗಿರಿ ಜಿಲ್ಲೆಯ ಚಟ್ನಳ್ಳಿ ಗ್ರಾಮದ ಸರ್ಕಾರಿ ಶಾಲೆ ಹಂದಿ, ನಾಯಿಗಳ ವಾಸಸ್ಥಾನವಾಗಿದೆ. ಮೇಲ್ಛಾವಣಿ ಇಂದೋ ನಾಳೆ ಕುಸಿದು ಬೀಳುವಷ್ಟು ಹದಗೆಟ್ಟು ಹೋಗಿದೆ ಎಂದು ಬೊಟ್ಟುಮಾಡಿದೆ.
ಒಂದು ಕಡೆ ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯ ಕ್ಲೀನ್ ಮಾಡಿಸುತ್ತಿರುವ ಟಾಯ್ಲೆಟ್ ಸರ್ಕಾರ, ಇದೀಗ ಹಂದಿ, ನಾಯಿಗಳನ್ನು ಶಾಲೆಗಳಲ್ಲಿ ಕೂಡಿ ಹಾಕುತ್ತಿದೆ ಎಂದು ಗೇಲಿ ಮಾಡಿರುವ ಬಿಜೆಪಿ, ನಕಲಿ ಕನ್ನಡ ಪಂಡಿತ ಮಜಾವಾದಿ ಸಿದ್ದರಾಮಯ್ಯ ರ ಸರ್ಕಾರಕ್ಕೆ ಮರ್ಯಾದೆ ಎನ್ನುವುದು ಉಳಿದಿದ್ದರೆ, ಕೂಡಲೇ ಚೆಕ್ ಬೌನ್ಸ್ ಶಿಕ್ಷಣ ಸಚಿವರ ರಾಜೀನಾಮೆ ಪಡೆದುಕೊಂಡು ಯೋಗ್ಯ ಶಿಕ್ಷಣ ಸಚಿವರನ್ನು ನೇಮಕ ಮಾಡಿ ಶಾಲೆಗಳನ್ನು ಸದೃಢಗೊಳಿಸಬೇಕು ಎಂದು ಸವಾಲು ಹಾಕಿದೆ.


























































