ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಯಡಿಯೂರಪ್ಪ ಅವರ ಎದುರಾಳಿಗಳಿಗೆ ಈಗ ಫೋನ್ ಟ್ಯಾಪಿಂಗ್ ಗುಮ್ಮಾ ಕಾಡುತ್ತಿದೆ. ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ಅನುಮಾನವನ್ನು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರೇ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಮಾಡಿರುವ ಆರೋಪಗಳು ಹಾಗೂ ಅವರು ಗೃಹ ಸಚಿವರು ಮತ್ತು ವಿಧಾನಸಭಾಧ್ಯಕ್ಷರಿಗೆ ನೀಡಿರುವ ದೂರುಗಳು ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ.
ಏನಿದು ದೂರವಾಣಿ ಕದ್ದಾಲಿಕೆ ಆರೋಪ..?
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ದ ಆಡಳಿತಾರೂಢ ಬಿಜೆಪಿಯ ಹೈಕಮಾಂಡ್ ಮಟ್ಟದಲ್ಲಿ ದೂರು ನೀಡಿ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗೆ ಸಾಕ್ಷಿಯಾಗಿರುವ ಬಿಜೆಪಿಯದ್ದೇ ಶಾಸಕ ಅರವಿಂದ್ ಬೆಲ್ಲದ್ ಹೆಸರು ಭಾವಿ ಸಿಎಂ ಸ್ಥಾನಕ್ಕೂ ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಅವರನ್ನು ದೂರವಾಣಿ ಕದ್ದಾಲಿಕೆಯ ಆತಂಕ ಕೂಡಾ ಆವರಿಸಿದೆ. ಈ ನಡುವೆ ಜೈಲಿನಿಂದಲೂ ಕೈದಿಗಳ ಹೆಸರಲ್ಲಿ ಬರುತ್ತಿರುವ ಫೋನ್ ಕರೆಯ ಪ್ರಸಂಗಗಳು ಅವರಿಗಿರುವ ಅನುಮಾನಗಳನ್ನು ಹಾಗೂ ಆತಂಕಗಳನ್ನು ದುಪ್ಪಟ್ಟುಗೊಳಿಸಿದೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮಗೆ ಜೈಲಿನಿಂದ ಯುವರಾಜ ಸ್ವಾಮಿ ಹೆಸರಲ್ಲಿ ಹಲವಾರು ಕರೆಗಳು ಬಂದಿವೆ. ತನ್ನ ವಿರುದ್ದ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಅರವಿಂದ್ ಬೆಲ್ಲದ್ ಅವರು ಗೃಹ ಸಚಿವರು ಹಾಗೂ ವಿಧಾನಸಭಾಧ್ಯಕ್ಷರಿಗೆ ನೀಡಿರುವ ದೂರು ಕಮಲ ಪಕ್ಷದಲ್ಲೇ ಕೋಲಾಹಲ ಸೃಷ್ಟಿಸಿದೆ. ಈ ಪತ್ರದಲ್ಲಿ ‘ಸ್ವಾಮಿ’, ‘ಯುವರಾಜ ಸ್ವಾಮಿ’ ಹೆಸರಲ್ಲಿ ಫೋನ್ ಕರೆ ಬಂದಿರುವ ವಿಚಾರವನ್ನು ಉಲ್ಲೇಖಿಸಿದ್ದಾರೆ. ತಮ್ಮ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ಅನುಮಾನವನ್ನು ಈ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಈ ಮೂಲಕ ತಮ್ಮ ವಿರುದ್ದ ಪಿತೂರಿ ನಡೆದಿದೆ ಎಂದು ಆರೋಪಿಸಿರುವ ಅವರು, ಈ ಕುರಿತಂತೆ ತನಿಖೆಗೆ ಆಗ್ರಹಿಸಿದ್ದಾರೆ.