ಬೆಂಗಳೂರು: ಈವರೆಗೂ ಜನರನ್ನು ಕರೆದೊಯ್ಯುವ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದೀಗ ಕಾರ್ಗೋ ಸೇವೆಯನ್ನೂ ಆರಂಭಿಸಿದೆ. ‘ನಮ್ಮ ಕಾರ್ಗೋ’ ಟ್ರಕ್ ಸೇವೆಗೆ ಇಂದು (23.12.2023) ಚಾಲನೆ ಸಿಕ್ಕಿದೆ.
‘ನಿಮ್ಮ ವಿಶ್ವಾಸ – ನಮ್ಮ ಕಾಳಜಿ’ ಘೊಷಣೆಯೊಂದಿಗೆ ‘ನಮ್ಮ ಕಾರ್ಗೋ’ ಟ್ರಕ್ ಸೇವೆಗೆ ಬೆಂಗಳೂರಿನಲ್ಲಿ ಮುನ್ನುಡಿ ಬರೆಯಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ “ನಮ್ಮ ಕಾರ್ಗೋ-ಟ್ರಕ್ ಸೇವೆ” ಯೋಜನೆಗೆ ಚಾಲನೆ ನೀಡಿ 20 ನೂತನ ಟ್ರಕ್ಕುಗಳಿಗೆ ಹಸಿರು ನಿಶಾನೆ ತೋರಿಸಿದರು.
ನಮ್ಮ ಕಾರ್ಗೋ-ಟ್ರಕ್ ಸೇವೆ ಉದ್ಘಾಟಿಸಿದ ಸಚಿವ ರಾಮಲಿಂಗ ರೆಡ್ಡಿ, ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್ಕುಗಳನ್ನು , ಒಂದು ವರ್ಷದೊಳಗಾಗಿ 500 ಟ್ರಕ್ಕುಗಳನ್ನು KSRTCಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು. ಪ್ರಸಕ್ತ ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ಈ ನಮ್ಮಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು. ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ , ಬಸ್ ನಿಲ್ದಾಣದಲ್ಲಿರುವ ಸ್ಥಳವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲಾಗುವುದೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತೆ) ಡಾ. ನಂದಿನಿ ದೇವಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ನಿಗಮದ ಪ್ರಸಕ್ತ ಕಾರ್ಯಾಚರಣೆಯ ಅಂಕಿಅಂಶ ಹೀಗಿದೆ:
ವಿಭಾಗಗಳು – 16
ಘಟಕಗಳು – 83
ಬಸ್ಸು ನಿಲ್ದಾಣಗಳು – 174
ಸಾರಿಗೆ ಸೇವೆಗಳು – 7649
ಒಟ್ಟು ಬಸ್ಸುಗಳು – 8355
ಪ್ರತಿನಿತ್ಯ ಕಾರ್ಯಾಚರಿಸಿರುವ ಕಿ.ಮೀ – 26.93 ಲಕ್ಷ ಕಿಮೀ
ಪ್ರತಿನಿತ್ಯ ಪ್ರಯಾಣಿಸಿರುವ ಅಂದಾಜು ಒಟ್ಟು ಪ್ರಯಾಣಿಕರ ಸಂಖ್ಯೆ – 32.48 ಲಕ್ಷ,
ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಸಂಖ್ಯೆ -18.41 ಲಕ್ಷ,
ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಟಿಕೇಟ್ ಮೊತ್ತ- 5.49 ಕೋಟಿ,
ಒಟ್ಟು ಸಿಬ್ಬಂದಿ – 33932 ನಿಗಮವು ಮೇ|| ಕೆ.ಎಂ.ಎಸ್ ಕೋಚ್ ಬಿಲ್ಡ್ರ್ಸ್ ಪ್ರೈವೆಟ್ ಲಿಮಿಟೆಡ್ ರವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಎರಡು ತಿಂಗಳ ಅವಧಿಗೆ ಹಾಗೂ ಎಸ್.ಎಂ ಕಣ್ಣಪ್ಪ ಪ್ರೈವೆಟ್ ಲಿಮಿಟೆಡ್ ರವರಿಗೆ ತನ್ನ ಟ್ರಕ್ಕ್ಅನ್ನು ಒಂದು ತಿಂಗಳ ಅವಧಿಗೆ ಬಾಡಿಗೆಗೆ ನೀಡಿ ಸಾರಿಗೆ ವಲಯದಲ್ಲಿ ಮಹತ್ತರ ಪ್ರಗತಿಯ ಹೆಜ್ಜೆಇರಿಸಿದೆ. ಜೊತೆಗೆ, ನಿಗಮವು ಸಾರ್ವಜನಿಕ ಸಾರಿಗೆಯಲ್ಲಿ ತನ್ನ ವಹಿವಾಟನ್ನು ಮತ್ತಷ್ಟು ಉತ್ತಮಪಡಿಸಲು 2021 ರಲ್ಲಿ ನಮ್ಮ ಕಾರ್ಗೊ ಹೆಸರಿನಿಂದ ಲಾಜಿಸ್ಟಿಕ್ಸ್ ಸೇವೆಯನ್ನು ಪ್ರಾರಂಭಿಸಿದೆ. ಇದರಡಿಯಲ್ಲಿ ನಿಗಮದ ಮಾರ್ಗಗಳು ಕಾರ್ಯಾಚರಣೆಯಲ್ಲಿರುವ ಸ್ಥಳಗಳಿಗೆ ನಿಗಮದ ಬಸ್ಸುಗಳಿಂದ ಪಾರ್ಸಲ್ಗಳನ್ನು ಸಾಗಿಸಲಾಗುತ್ತಿದೆ. ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ಅಭಿವೃದ್ಧಿಪಡಿಸುವ ಸಲುವಾಗಿ ಜಿಪಿಎಸ್ ಅಳವಡಿಕೆಯೊಂದಿಗೆ ನವೀನ ಬ್ರಾಂಡ್ “ನಮ್ಮ ಕಾರ್ಗೋ-ಟ್ರಕ್ ಸೇವೆ” ಗಳನ್ನು ಈಗ ಪರಿಚಯಿಸುತ್ತಿದೆ.
“ನಮ್ಮ ಕಾರ್ಗೋ-ಟ್ರಕ್ ಸೇವೆ”ಯ ಪ್ರಮುಖ ಅಂಶಗಳು:
ಗ್ರಾಹಕರ ಸರಕುಗಳನ್ನು ರಾಜ್ಯ ವ್ಯಾಪ್ತಿಯಲ್ಲಿ ಸುರಕ್ಷಿತ, ವೇಗ ಹಾಗೂ ವಿಶ್ವಾಸಾರ್ಹವಾಗಿ ಸಾಗಿಸಲಾಗುವುದು.
ಈ ಟ್ರಕ್ಗಳು ಮುಚ್ಚಲಾದ ಕಂಟೈನರ್ ಮಾದರಿಯ 14ಅ *7ಅ *7ಅ ಅಳತೆಯದ್ದಾಗಿರುತ್ತದೆ.
ನಿಗಮವು ಬಲವಾದ ನೆಟ್ವರ್ಕ್ ವ್ಯವಸ್ಥೆಯನ್ನು ಹೊಂದಿದ್ದು, ಟ್ರಕ್ ಟ್ರ್ಯಾಕಿಂಗ್ ಸೌಲಭ್ಯದೊಂದಿಗೆ ವಿಶ್ವಾಸಾರ್ಹ ಸಿಬ್ಬಂದಿಗಳ ಮುಖೇನ ಗ್ರಾಹಕರ ಸರಕುಗಳನ್ನು ಸುರಕ್ಷಿತವಾಗಿ ಸರಿಯಾದ ಸಮಯಕ್ಕೆ ಸಾಗಿಸಲಿದೆ.
ಈ ನೂತನ ಸರಕು ಸಾಗಣೆ ವ್ಯವಸ್ಥೆಯನ್ನು ಆಸಕ್ತ ಗ್ರಾಹಕರಿಗೆ ಕರಾರು ಒಪ್ಪಂದಕ್ಕೆ ಒಳಪಟ್ಟು ಒದಗಿಸಲಿದೆ.
ಈ ಲಾಜಿಸ್ಟಿಕ್ ಸೇವೆಗಳಿಂದ ನಿಗಮ ಹಾಗೂ ಸೌಲಭ್ಯ ಪಡೆಯುವ ಸಂಸ್ಥೆಗಳ ನಡುವೆ ಒಡನಾಟ ವರ್ಧನೆಯಾಗಲಿದೆ.
ಈ ಟ್ರಕ್ ವಾಹನದ ವೈಶಿಷ್ಟ್ಯಗಳು :ಮಾದರಿ ಟಾಟಾ 1112LPT, ಸರಕು ಸಾಗಣೆ ಸಾಮರ್ಥ್ಯ-06 ಟನ್, ಕಂಟೈನರ್ ಎತ್ತರ 2120 ಮಿಮಿ, ಕಂಟೈನರ್ ಅಗಲ 2228 ಮಿಮಿ, ಕಂಟೈನರ್ ಉದ್ದ 4439 ಮಿಮಿ, ಕವಚ ಮುಚ್ಚಲಾದ ಮಾದರಿ.
ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಯಿಂದ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಗೆ ಲಭ್ಯವಿರುತ್ತದೆ. ನಿಗಮವು ಗ್ರಾಹಕರುಗಳ ಅಗತ್ಯತೆಗನುಗುಣವಾಗಿ ಟ್ರಕ್ ಸೇವೆ ಒದಗಿಸಲಿದ್ದು, ಇಚ್ಚೆಯುಳ್ಳ ಆಸಕ್ತ ಗ್ರಾಹಕರು ತಮ್ಮ ಅಗತ್ಯತೆಗಳ ಮಾಹಿತಿ, ವಿವರಗಳನ್ನು ಒದಗಿಸುವಂತೆ ಕೋರಲಾಗಿದೆ. ಕಾಲ್ ಸೆಂಟರ್ 080-26252625, ಇ-ಮೇಲ್ ವಿಳಾಸ logistics@ksrtc.org ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ ಎಂದು KSRTC ಮೂಲಗಳು ತಿಳಿಸಿವೆ.