ಬೆಂಗಳೂರು: ರಾಜಧಾನಿ ಬೆಂಗಳೂರು ಜನರ ಹೆಮ್ಮೆಯ ಸಾರಿಗೆ ಸಂಸ್ಥೆ BMTCಯಲ್ಲಿ 58 ವರ್ಷ ಪೂರ್ಣಗೊಂಡ ನೌಕರರಿಗೆ ‘ಪ್ರಯಾಸ್’ ಯೋಜನೆಯಡಿ ಪೀಚಣಿ ಸೌಲಭ್ಯ ಜಾರಿಗೊಳಿಸಲಾಗಿದೆ. ಅರ್ಹ ನೌಕರರಿಗೆ ಆದೇಶ ಪತ್ರವನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹಂಚಿದ್ದಾರೆ.
ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ‘ಪ್ರಯಾಸ್’ ಯೋಜನೆಯಡಿ 100ಕ್ಕೂ ಹೆಚ್ಚು ನೌಕರರ ಪಿಂಚಣಿ ಪಾವತಿ ಆದೇಶವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನೌಕರರಿಗೆ ವಿತರಿಸಲಾಗುತ್ತಿದೆ. ಪ್ರಯಾಸ್ ಯೋಜನೆಯಡಿಯಲ್ಲಿ ಭಾರತ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಪಿಂಚಣಿ ಆದೇಶಗಳನ್ನು ನೀಡುತ್ತಿರುವ ಸ್ಥಾಪಿತ ಸಂಸ್ಥೆಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಒಂದು.
ಪಿಂಚಣಿ ಆದೇಶವನ್ನು ಬಿಡುಗಡೆ ಮಾಡಿದ ಸಚಿವ ರಾಮಲಿಂಗ ರೆಡ್ಡಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಯಾಸ್ ಯೋಜನೆಯಡಿ 160 ಪಿಂಚಣಿ ಆದೇಶಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ, ಜೂನ್-2024ರ ಮಾಹೆಯಲ್ಲಿ ಲೆಕ್ಕಪತ್ರ ಇಲಾಖೆಯಿಂದ ಸಂಸ್ಥೆಯ ನೌಕರರಿಗೆ ಪ್ರಯಾಸ್ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸಭೆ ಕರೆದು, ಪಿಂಚಣಿ ಇತ್ಯರ್ಥಪಡಿಸಲು ನೀಡಬೇಕಾದ ದಾಖಲೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ, ಸಕಾಲದಲ್ಲಿ ದಾಖಲೆಗಳನ್ನು ನೀಡುವಂತೆ ತಿಳುವಳಿಕೆ ನೀಡಿದ ಪ್ರಯುಕ್ತ ನೌಕರರು ಸಕಾಲದಲ್ಲಿ ಒದಗಿಸಿದ ದಾಖಲೆಗಳನ್ವಯ ಲೆಕ್ಕಪತ್ರ ಇಲಾಖೆಯಿಂದ ಪಿಂಚಣಿ ಅಭ್ಯರ್ಥನವನ್ನು ಸಿದ್ಧಪಡಿಸಿ, ಪ್ರಾದೇಶಿಕ ಭವಿಷ್ಯನಿಧಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಒಟ್ಟು 100ಕ್ಕೂ ಹೆಚ್ಚು ಅರ್ಹ ನೌಕರರ ಪಿಂಚಣಿ ಪಾವತಿ ಆದೇಶಗಳನ್ನು ಬಿಡುಗಡೆಗೊಳಿಸುವಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಲು ಸಂತಸವಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದರು.
‘ಪ್ರಯಾಸ್’ ಹೈಲೈಟ್ಸ್ ಹೀಗಿದೆ:
ಈ ಯೋಜನೆಯಡಿ ನೌಕರರು 58 ವರ್ಷ ತುಂಬಿದ ಮಾಹೆಯಲ್ಲಿಯೇ ಪಿಂಚಣಿ ಮೊತ್ತವನ್ನು ಪಡೆಯುವ ಸೌಲಭ್ಯವಾಗಿರುತ್ತದೆ.
21.07.2020 ರಿಂದ ಈ ಯೋಜನೆಯು ಪ್ರಾರಂಭವಾಗಿದ್ದು, ಇದು ಪ್ರಾದೇಶಿಕ ಭವಿಷ್ಯನಿಧಿ ಕಛೇರಿಯ ಒಂದು ಪ್ರಯತ್ನವಾಗಿರುತ್ತದೆ.
ಈ ಯೋಜನೆಗೂ ಮೊದಲು ನೌಕರರು 58 ವರ್ಷ ಪೂರ್ಣಗೊಂಡ ನಂತರ ಪಿಂಚಣಿಗೆ ಸಂಬಂಧಿಸಿದಂತೆ, ಹಲವಾರು ದಾಖಲೆ ಪತ್ರಗಳೊಂದಿಗೆ ಪಿಂಚಣಿ ಸಲುವಾಗಿ ಪ್ರಾದೇಶಿಕ ಭವಿಷ್ಯನಿಧಿ ಕಛೇರಿಗೆ ಅಲೆಯುವ ಪರಿಸ್ಥಿತಿ ಇರುತ್ತದೆ ಹಾಗೂ 2 ರಿಂದ 3 ತಿಂಗಳವರೆಗೆ ಪಿಂಚಣಿ ಇತ್ಯರ್ಥಪಡಿಸಲು ಸಮಯ ಉಂಟಾಗುತ್ತಿತ್ತು ಹಾಗೂ ವಿವಿಧ ವಿಭಾಗಗಳಿಂದ ವರ್ಗಾವಣೆ ಸಂದರ್ಭಗಳಲ್ಲಿ ಸಕಾಲದಲ್ಲಿ ಅನೆಕ್ಷರ್-ಕೆ ಗಳು ದೊರೆಯದೇ ಸಂಸ್ಥೆಯ ನೌಕರರು 6 ತಿಂಗಳು 1 ವರ್ಷದವರೆಗೆ ಪಿಂಚಣಿ ಇರ್ತರ್ಥವಾಗದೇ ತೊಂದರೆ ಅನುಭವಿಸಿದ್ದಾರೆ.
‘ಪ್ರಯಾಸ್’ ಯೋಜನೆಯಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಕ್ರೂಢೀಕರಿಸಿ ಮುಂಚಿತವಾಗಿ ಸಲ್ಲಿಸುವುದರಿಂದ ಪಿಂಚಣಿ ಪಾವತಿ ಆದೇಶದ ವಿಲೇವಾರಿ ನೌಕರರ 58ನೇ ವರ್ಷದ ಕೊನೆಯ ದಿನವೇ ವಿತರಿಸಲಾಗುತ್ತಿದೆ.