ಮಂಗಳೂರು: ತನ್ನ ಭದ್ರಕೋಟೆ ಕರಾವಳಿಯಲ್ಲಿ ಪಾರುಪತ್ಯ ಮುಂದುವರಿಸಲು ಪಣ ತೊಟ್ಟಿರುವ ಬಿಜೆಪಿ ಇಂದು ಮತ್ತೊಮ್ಮೆ ಶಕ್ತಿ ಪ್ರದರ್ಶನ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೃಜೇಶ್ ಚೌಟ ಅವರು ನಾಮಪತ್ರ ಸಲ್ಲಿಸಿದ್ದು ಅವರಿಗೆ ಬೆಂಗಾವಲಾಗಿ ಸಾವಿರಾರು ಬಿಜೆಪಿ ಕಾರ್ಯಕರ್ತರು ರಣಕಹಳೆ ಊದಿದ ವೈಖರಿ ನೋಡಿದರೆ ಹಳೆಯ ಉತ್ಸಾಹವೇ ಪ್ರತಿಬಿಂಭಿಸಿದಂತಿತ್ತು.
ಸಂಸದ ನಳಿನ್ ಕುಮಾರ್ ವಿರುದ್ದ ವ್ಯಕ್ತವಾಗಿದ್ದ ಜನಾಕ್ರೋಶದ ನಂತರ ಬಿಜೆಪಿಯ ಕಥೆ ಹೇಗೋ ಎಂಬ ಚಿಂತೆಯಲ್ಲಿದ್ದ ಬಿಜೆಪಿಯ ಪ್ರಮುಖರಿಗೆ ಬಿಜೆಪಿ ಪಕ್ಷದ ಹೊಸ ಹುರಿಯಾಳು ಇಂದು ಸ್ಪಷ್ಟ ಸಂದೇಶವನ್ನು ರವಾನಿಸಿದರು. ಕ್ಯಾಪ್ಟನ್ ಅವರ ಹಿಂದೆ ಕಮಲ ಸೈನಿಕರು ಬೃಹತ್ ಮೆರವಣಿಗೆ ನಡೆಸಿ ಬಿಜೆಪಿಯ ಶಕ್ತಿಯನ್ನು ಅನಾವರಣ ಮಾಡಿದರು.
ನಾಮ ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕ್ಯಾಪ್ಟನ್ ಬೃಜೇಶ್ ಚೌಟ, ಬಳಿಕ ಬಂಟ್ಸ್ ಹಾಸ್ಟೆಲ್ ಬಳಿಯ ಬಿಜೆಪಿ ಚುನಾವಣಾ ಕಚೇರಿಯಿಂದ ಮಂಗಳೂರು ಪುರಭವನವರೆಗೆ ಮೆರವಣಿಗೆಯಲ್ಲಿ ತೆರಳಿದರು. ಜ್ಯೋತಿ ವೃತ್ತ, ಹಂಪನಕಟ್ಟೆ ಸಹಿತ ವಿವಿಧ ಸ್ಥಳಗಳಲ್ಲಿ ಕಮಲ ಕಾರ್ಯಕರ್ತರ ಜೈಕಾರ ಪಕ್ಷದ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿತು. ಸಂಸದ ನಳಿನ್ ಕುಮಾರ್ ಹಾಗೂ ಕರಾವಳಿಯ ಶಾಸಕರ ಉಪಸ್ಥಿತಿಯಲ್ಲಿ ಬೃಜೇಶ್ ಚೌಟ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ನಾಯಕರ ಒಗ್ಗಟ್ಟಿನ ಪ್ರದರ್ಶನ:
ಈ ನಡುವೆ, ಪುರಭವನ ಬಳಿ ನಡೆದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ನಾಯಕರು, ಬೃಜೇಶ್ ಚೌಟ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ಮರು ಸ್ಥಾಪಿಸುವ ಸಂಕಲ್ಪ ಮಾಡಿದರು. ಈ ಸಮಾವೇಶ ಬಿಜೆಪಿ ನಾಯಕರ ಒಗ್ಗಟ್ಟಿನ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಸಹಿತ ಕರಾವಳಿಯ ಶಾಸಕರು, ಮುಖಂಡರಾದ ಸಿ.ಟಿ.ರವಿ, ಅರುಣ್ ಕುಮಾರ್ ಪುತ್ತಿಲ ಸಹಿತ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.