ಬೆಂಗಳೂರು: ರಾಜಧಾನಿ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗ್ರಹಕ್ಕೆ ಸಿಸಿಬಿ ಪೊಲೀಸರು ಲಗ್ಗೆ ಹಾಕಿ ಅಕ್ರಮಗಳನ್ನು ಬೇಧಿಸಿದ್ದಾರೆ.
ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ ನಡೆದಿದೆ. ನೂರಕ್ಕೂ ಹೆಚ್ಚು ಪೊಲೀಸರು ಶ್ವಾನದಳ ಜೊತೆ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ರಾಮನಗರ ಜೈಲಿನ ಮೇಲೆ ಪೊಲೀಸರಿಂದ ದಾಳಿ ನಡೆದಿತ್ತು. ಈ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಜೈಲಿನ ಮೇಲೆ ಸಿಸಿಬಿ ಪೊಲೀಸರೂ ದಾಳಿ ನಡೆಸಿದ್ದಾರೆ. ಗಾಂಜಾ ಮತ್ತು ಮೊಬೈಲ್ ಬಳಕೆ ಬಗ್ಗೆ ವ್ಯಾಪಕ ದೂರು ಹಿನ್ನೆಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ದಾಳಿ ವೇಳೆ ಮೊಬೈಲ್, ಗಾಂಜಾ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಅಷ್ಟೇ ಅಲ್ಲ, ಜೈಲಿನ ವಸ್ತುಗಳನ್ನೆ ಆಯುಧಗಳನ್ನಾಗಿ ಕೈದಿಗಳು ಮಾಡಿಕೊಂಡಿದ್ದಾರೆಂಬ ಸಂಗತಿಯೂ ಬೆಳಕಿಗೆ ಬಂದಿವೆ. ಜೈಲಿನಲ್ಲಿ ನೀಡುವ ತಟ್ಟೆ, ಲೋಟ, ಕಬ್ಬಿಣದ ಸಲಾಕೆಗಳನ್ನು ಆಯುಧಗಳನ್ನಾಗಿ ಮಾಡಿಕೊಂಡಿದ್ದು ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.