ಬೆಂಗಳೂರು: ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಲಿಂಗಾಯತ ಸಮುದಾಯ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದವೂ ರಣಕಹಳೆ ಮೊಳಗಿಸಿದೆ. ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಪಂಚಮಸಾಲಿಗಳ ಶಕ್ತಿ ಪ್ರದರ್ಶನ ನಡೆಸಲು ತಯಾರಿ ನಡೆದಿದೆ.
2021 ಫೆಬ್ರುವರಿ 21ರಂದು ಬೆಂಗಳೂರಿನಲ್ಲಿ ನಡೆದ 10 ಲಕ್ಷ ಪಂಚಮಸಾಲಿ ಮಂದಿಯ ಐತಿಹಾಸಿಕ ಶಕ್ತಿಪ್ರದರ್ಶನದ ತೃತೀಯ ವರ್ಷಾಚರಣೆ ಅಂಗವಾಗಿ ಮತ್ತೊಂದು ಚಾರಿತ್ರಿಕ ಸಮಾವೇಶ ನಡೆಸುವ ತಯಾರಿ ಇದಾಗಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಶ್ರೀ ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ (ಫೆಬ್ರುವರಿ 21)ಸಂಜೆ 5ಗಂಟೆಗೆ ಬೆಂಗಳೂರಿನ ಪರಾಗ್ ಹೊಟೇಲ್‌ನಲ್ಲಿ ಪಂಚಮಸಾಲಿ ರಾಜ್ಯ ಕಾರ್ಯಕಾರಣಿ ಹಾಗೂ ಜನಪ್ರತಿನಿಧಿಗಳ ಸಭೆ ನಡೆಯಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
2021 ಫೆಬ್ರುವರಿ 21ರಂದು ಬೆಂಗಳೂರಿನಲ್ಲಿ 10 ಲಕ್ಷ ಪಂಚಮಸಾಲಿಗಳ ಐತಿಹಾಸಿಕ ಶಕ್ತಿಪ್ರದರ್ಶನ ನಡೆದಿದ್ದು ಅದರ ತೃತೀಯ ವರ್ಷಾಚರಣೆ ಅಂಗವಾಗಿ ಪಂಚಮಸಾಲಿ – ಗೌಡ – ಮಲೆಗೌಡ-ದೀಕ್ಷ ಲಿಂಗಾಯತರ ರಾಷ್ಟ್ರೀಯ, ರಾಜ್ಯ , ಜಿಲ್ಲಾ, ವಿವಿಧ ಸಂಘಟನೆಗಳ ಪ್ರಮುಖರ ಹಾಗೂ ಶಾಸಕರ, ಸಂಸದರ, ಹಾಲಿ ಮಾಜಿ ಜನಪ್ರತಿನಿಧಿಗಳ ಸಭೆಯನ್ನು ವಿಧಾನಸೌಧ ಅಧಿವೇಶನ ಸಂಧರ್ಭದಲ್ಲಿ ನಡೆಸಲಾಗುತ್ತದೆ. 2A ಹಾಗೂ ಲಿಂಗಾಯತ OBC ಮೀಸಲಾತಿ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮ ಕ್ಷೇತ್ರ ಕೂಡಲಸಂಗಮದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಲಿಂಗಾಯತ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ವಿಜಯಾನಂದ್ ಕಾಶಪ್ಪನವರ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ಮೀಸಲಾತಿ ಚಳುವಳಿ ಸ್ವಾಗತ ಸಮಿತಿ ಅಧ್ಯಕ್ಷ ಬಸವನಗೌಡ ಪಾಟಿಲ್ ಯತ್ನಾಳ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ನೀರು ಪೂರೈಕೆ ನಿಗಮ ಅಧ್ಯಕ್ಷ ವಿನಯ್ ಕುಲಕರ್ಣಿ, CM ಸಲಹೆಗಾರ ಬಿ.ಆರ್.ಪಾಟೀಲ್, ಮಾಜಿ ಸಚಿವ ಎಬಿ ಪಾಟಿಲ್, ಶಾಸಕರಾದ ಸಿ.ಸಿ.ಪಾಟೀಲ್, ಅರವಿಂದ್, ಸಿದ್ದು ಸವದಿ, ಸಂಸದರಾದ ಕರಡಿ ಸಂಗಣ್ಣ, ಈರಣ್ಣ ಕಡಾಡಿ , ಮಾಜಿ ಸಂಸದ ಶಿವರಾಮೇಗೌಡ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.