ಮತ್ತೆ ಪಂಚಮಸಾಲಿ ಮೀಸಲಾತಿ ರಣಕಹಳೆ.. ಮಾತು ಮರೆತ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಖಾಡ ಸಜ್ಜು.. ಬೆಲ್ಲದ್, ಯತ್ನಾಳ್, ಸಿ.ಸಿ.ಪಾಟೀಲ್ ಜೊತೆ ‘ದುಂಡು ಮೇಜಿನ ಸಭೆ.. ಸಿಎಂ ಬಸವರಾಜ್ ಬೊಮ್ಮಾಯಿಗೆ ಖಡಕ್ ಸಂದೇಶ ರವಾನೆ..
ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾಗುತ್ತಿದ್ದಂತೆಯೇ ಲಿಂಗಾಯತ ಸಮುದಾಯವು ರಾಜ್ಯ ಸರ್ಕಾರಕ್ಕೆ ರಣವೀಳ್ಯವನ್ನೇ ನೀಡಿದೆ. ಪಂಚಮಸಾಲಿ ಲಿಂಗಾಯತ ಸಮುದಾಯದ ಬಹುಕಾಲದ ಮೀಸಲಾತಿ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸಂತ’ಶ್ರೇಷ್ಠರಾದ ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಪ್ರಬಲ ಹೋರಾಟಕ್ಕೆ ಅಖಾಡ ಸಜ್ಜಾಗುತ್ತಿದೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ನಾಳೆ ಆಯೋಜಿತವಾಗಿರುವ ‘ದುಂಡು ಮೇಜಿನ ಸಭೆ’ ಕುತೂಹಲದ ಕೇಂದ್ರ ಬಿಂದುವಾಗಿದೆ.
ಏನಿದು ರಣಕಹಳೆ..?
ಹಲವಾರು ವರ್ಷಗಳಿಂದ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಎದುರುತ್ತಿರುವ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ 2 (ಎ)ಗೆ ಸೇರಿಸಬೇಕು, ಮೀಸಲಾತಿ ಪ್ರಮಾಣವನ್ನ ಹೆಚ್ಚಿಸಬೇಕೆಂದು ಹೋರಾಟ ನಡೆದಿದೆ. ಆರು ತಿಂಗಳ ಹಿಂದೆ ಬೃಹತ್ ಪಾದಯಾತ್ರೆ, ಸರಣಿ ಸತ್ಯಾಗ್ರಹ, ಶಕ್ತಿ ಪ್ರದರ್ಶನ ಮೂಲಕ ಹಲವು ಮಜಲುಗಳಲ್ಲಿ ನಡೆದ ಹೋರಾಟಗಳಲ್ಲಿ ಸ್ವಾಮೀಜಿಗಳೇ ಮುಂಚೂಣಿಯಲ್ಲಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಕಾನೂನು ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿಯವರು, ಶೀಘ್ರದಲ್ಲೇ ಮೀಸಲಾತಿ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆರು ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿರುವುದರಿಂದ ಇದೀಗ ‘ನುಡಿದಂತೆ ನಡೆಯಿರಿ..’ ಎಂಬ ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಮುಂದಾಗಿದೆ ಎಂದು ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಶ್ರೀಗಳ ಖಡಕ್ ನುಡಿ..
ಈ ‘ಪಂಚಮಸಾಲಿ ಹೋರಾಟ 2.0’ ಕುರಿತಂತೆ ಉದಯ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ‘ಪಂಚಮಸಾಲಿ ಮೀಸಲಾತಿ ಹೋರಾಟ’ ತಾರ್ಕಿಕ ಅಂತ್ಯದವರೆಗೂ ಸಾಗಲಿದೆ ಎಂದರು. ಹಿಂದೆ, ಸರ್ಕಾರ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ನಾವು ಹೋರಾಟವನ್ನು ತಾತ್ಕಾಲಿಕವಾಗಿ ವಿಶ್ರಾಂತಿಯಲ್ಲಿರಿಸಿದ್ದೇವೆ. ಆದರೆ ನಮ್ಮ ಬೇಡಿಕೆ ಈಡೇರುವ ಬಗ್ಗೆ ಈಗ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ಮುಂದುವರಿಸುವ ಚಿಂತನೆ ನಡೆಸಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಈ ಸಂಬಂಧ ನಾಳೆ ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ನಡೆಯಲಿರುವ ‘ದುಂಡು ಮೇಜಿನ ಸಭೆ’ಯಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಸಿ.ಸಿ.ಪಾಟೀಲ್ ಸಹಿತ ಹಲವು ನಾಯಕರು ಭಾಗವಹಿಸಿ ತಮ್ಮ ಹೋರಾಟವನ್ನು ಜನಾಂದೋಲನದತ್ತ ರೂಪಾಂತರಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಈ ಹಿಂದೆ ಬೃಹತ್ ಹೋರಾಟ ಸಂದರ್ಭದಲ್ಲಿ ಸರ್ಕಾರ ನಮಗೆ ಭರವಸೆ ನೀಡಿತ್ತು. ವಿಧಾನಸಭೆಯಲ್ಲೂ ನಾಯಕರಿಂದ ಬೇಡಿಕೆ ಈಡೇರಿಕೆಯ ಭರವಸೆ ಸಿಕ್ಕಿತ್ತು. ಭರವಸೆ ನೀಡಿದ್ದ ಸರ್ಕಾರಕ್ಕೆ ನಾವು ಕೂಡಾ ಆರು ತಿಂಗಳ ಗಡುವು ನೀಡಿದ್ದೆವು. ಆ ಗಡುವು ಮುಗಿಯುತ್ತಿದ್ದರೂ ಸರ್ಕಾರ ಈ ಕುರಿತು ಇನ್ನೂ ತೀರ್ಮಾನ ಪ್ರಕಟಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ ಜಯಮೃತ್ಯುಂಜಯ ಶ್ರೀಗಳು, ಕಳೆದ ಹೋರಾಟ ಸಂದರ್ಭದಲ್ಲಿ ಬಿಎಸ್‌ವೈ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಕಾನೂನು ಸಚಿವರಾಗಿದ್ದರು. ನಮ್ಮ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆಯನ್ನು ಬೊಮ್ಮಾಯಿ ನೀಡಿದ್ದರು. ಇದೀಗ ಅವರೇ ಸಿಎಂ ಆಗಿರುವುದರಿಂದ ಬೇಡಿಕೆ ಈಡೇರಿಕೆಯ ತೀರ್ಮಾನವನ್ನು ಕೈಗೊಳ್ಳುವುದು ಕಷ್ಟವಿಲ್ಲ. ಕಾಲವೂ ಮಿಂಚಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.