ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿದ್ದು, ನುಡಿದಂತೆ ನಡೆಯದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ತರಂಗ ಎಬ್ಬಿಸಲು ಸಮುದಾಯದ ಮುಖಂಡರು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ವಿವಿಧ ಜಿಲ್ಲೆಗಳ ಪ್ರಮುಖರು ಭಾಗಿಯಾಗುತ್ತಿದ್ದು ಸರ್ಕಾರದ ವಿರುದ್ದದ ಹೋರಾಟವನ್ನು ತೀವ್ರಗೊಳಿಸಬೇಕೆಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ. ಅದರಲ್ಲೂ ಮುಂಬರುವ ಚುನಾವಣೆಯ ಬ್ಯಾಲೆಟ್ ಪೇಪರ್‌ನಲ್ಲಿ ಉತ್ತರ ನೀಡುವುದಾಗಿ ಪ್ರಮುಖರು ನೀಡಿಡಿರುವ ಎಚ್ಚರಿಕೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳುವಂತೆ ಮಾಡಿದೆ.
ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ನೇತ್ರತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಯುತ್ತಿದೆ. ಇದೀಗ ಈ ಸತ್ಯಾಗ್ರಹ 33ನೇ ದಿನವೂ ಮುಂದುವರಿದಿದ್ದು ದಿನಕ್ಕೊಂದು ಜಿಲ್ಲೆಗಳ ಪ್ರಮುಖರು ತಂಡೋಪತಂಡವಾಗಿ ಭಾಗವಹಿಸಿ ಹೋರಾಟಕ್ಕೆ ಪ್ರಬಲ ರೂಪ ನೀಡುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಕೆಲವು ಘಟಕಗಳ ಪ್ರಮುಖರು, ನುಡಿದಂತೆ ನಡೆಯದವರಿಗೆ ಮುಂಬರುವ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಉತ್ತರ ಕೊಡುತ್ತೇವೆ ಎಂದು ಘರ್ಜಿಸಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಹಾದಿ ಕಠಿಣವಾಗಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇದೇ ವೇಳೆ, ಹೋರಾಟ ಆರಂಭವಾಗಿ ತಿಂಗಳು ಕಳೆದರೂ ಸರ್ಕಾರ ಸ್ಪಂಧಿಸದಿರುವುದರಿಂದ ಸಿಟ್ಟಾಗಿರುವ ಗಂಗಾವತಿಯ ಪ್ರತಿನಿಧಿಗಳು ಹೆದ್ದಾರಿ ಬಂದ್‌ಗೆ ಕರೆ ನೀಡುವಂತೆ ಶ್ರೀಗಳಿಗೆ ಮನವಿ ಮಾಡಿದ್ದಾರೆ.
👉 ಇದನ್ನೂ ಓದಿ.. ಪಂಚಮಸಾಲಿ ಹೋರಾಟದಲ್ಲಿ ವಿವಿಧ ಸಮುದಾಯಗಳ ಶ್ರೀಗಳೂ ಭಾಗಿ.. ಜಗದ್ಗುರುಗಳ ಹೋರಾಟಕ್ಕೆ ಮತ್ತಷ್ಟು ಬಲ..
ಪಂಚಮಸಾಲಿ ಕೂಡಲಸಂಗಮ ಪೀಠದ ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬುಧವಾರ ಆರ್ಯ ಈಡಿಗ ಸಮಾಜದ ಗುರುಗಳಾದ ಶ್ರೀ ಪ್ರಣಮಾನಂದ ಮಹಾಸ್ವಾಮಿ ಭೇಟಿ ನೀಡಿದರು. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಅವರೂ ಭಾಗಿಯಾಗಿ ರಣೋತ್ಸಾಹ ತುಂಬಿದರು.