ಮಂಗಳೂರು: ‘ಮಧ್ಯಪ್ರಾಚ್ಯ ಸಂಘರ್ಷ’ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಆಗ್ರಹಿಸಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ದಿನೇದಿನೇ ಉಲ್ಬಣಿಸುತ್ತಿರುವ ಯುದ್ಧದ ಪರಿಸ್ಥಿತಿಯು ಅಲ್ಲಿ ನೆಲೆಸಿರುವ ಲಕ್ಷಾಂತರ ತುಳುನಾಡಿನವರು ಸೇರಿದಂತೆ ಭಾರತೀಯರ ನೆಮ್ಮದಿಯನ್ನು ಕಸಿದುಕೊಂಡಿದೆ. ಇಸ್ರೇಲ್, ಇರಾನ್, ದುಬೈ, ಕತಾರ್, ಬಹರೇನ್ ಸೇರಿದಂತೆ ಯುದ್ಧ ಪೀಡಿತ ಪ್ರದೇಶಗಳಲ್ಲಿನ ಅನಿಶ್ಚಿತತೆ ಅತ್ಯಂತ ಕಳವಳಕಾರಿಯಾಗಿದ್ದು, ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪದ್ಮರಾಜ್ ಪೂಜಾರಿ ಪ್ರತಿಪಾದಿಸಿದ್ದಾರೆ.
ಪ್ರತಿದಿನದ ಸ್ಫೋಟದ ಸದ್ದುಗಳು ಮತ್ತು ಅಸುರಕ್ಷಿತ ಭಾವನೆ ಅಲ್ಲಿನ ಕುಟುಂಬಗಳು, ವಿಶೇಷವಾಗಿ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ತೀವ್ರವಾದ ಕೆಟ್ಟ ಪರಿಣಾಮ ಬೀರುತ್ತಿದೆ. ಯುದ್ಧದ ಸನ್ನಿವೇಶ ಮಕ್ಕಳ ಸಹಜ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದ್ದು, ಅಲ್ಲಿನ ಭಾರತೀಯರು ಪ್ರತಿಕ್ಷಣವನ್ನೂ ಆತಂಕದಲ್ಲೇ ಕಳೆಯುವಂತಾಗಿದೆ ಎಂದವರು ಗಮನಸೆಳೆದಿದ್ದಾರೆ.
ವಿಮಾನ ಸಂಚಾರಗಳು ಸ್ಥಗಿತಗೊಂಡಿರುವುದು ಅಥವಾ ಅನಿಶ್ಚಿತತೆಯಿಂದ ಕೂಡಿರುವುದರಿಂದ, ತಾಯ್ನಡಿಗೆ ಮರಳಲು ಬಯಸುವ ಅನೇಕ ಕುಟುಂಬಗಳು ಯಾವುದೇ ದಾರಿಯಿಲ್ಲದೆ ಅಲ್ಲಿಯೇ ಸಿಲುಕಿಕೊಂಡಿವೆ ಎಂದು ಕಳವಳ ವ್ಯಕ್ತಪಡಿಸಿರುವ ವಕೀಲರೂ ಆಗಿರುವ ಪದ್ಮರಾಜ್ ಆರ್ ಪೂಜಾರಿ, ಜಗತ್ತಿನ ಸಣ್ಣಪುಟ್ಟ ರಾಷ್ಟ್ರಗಳೂ ಈಗಾಗಲೇ ತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆಸಿಕೊಂಡಿವೆ. ಆದರೆ, ಇಷ್ಟೆಲ್ಲಾ ಗಂಭೀರ ಪರಿಸ್ಥಿತಿ ಇದ್ದರೂ ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಮತ್ತು ಪರಿಣಾಮಕಾರಿ ಪ್ರಯತ್ನಗಳು ನಡೆಯದಿರುವುದು ವಿಷಾದನೀಯ ಎಂದಿದ್ದಾರೆ.
ಪರಿಸ್ಥಿತಿ ಕೈಮೀರುವ ಮುನ್ನ ಕೇಂದ್ರ ಸರ್ಕಾರವು ರಾಜತಾಂತ್ರಿಕ ಮಟ್ಟದಲ್ಲಿ ಮಧ್ಯಪ್ರವೇಶಿಸಿ ಅನಿವಾಸಿಗಳ ಸುರಕ್ಷತೆ ಖಚಿತಪಡಿಸಬೇಕು. ವಿಮಾನಯಾನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಸಂಕಷ್ಟದಲ್ಲಿರುವ ಕುಟುಂಬಗಳು ಮತ್ತು ಮಕ್ಕಳನ್ನು ಭಾರತಕ್ಕೆ ಕರೆತರಲು ಕೂಡಲೇ ವಿಶೇಷ ಚಾರ್ಟರ್ ವಿಮಾನಗಳ ವ್ಯವಸ್ಥೆ ಮಾಡಬೇಕು. ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನೆರವು ನೀಡಲು ವಿಶೇಷ ವಿಭಾಗವನ್ನು ತೆರೆಯಬೇಕು. ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರವು ತನ್ನ ಪ್ರಜೆಗಳ ಬೆನ್ನಿಗೆ ನಿಂತು, ಲಕ್ಷಾಂತರ ಕುಟುಂಬಗಳ ಆತಂಕವನ್ನು ದೂರ ಮಾಡಬೇಕು ಎಂದವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.






















































