ಬೆಂಗಳೂರು: ಮೋದಿ ಸೋಲಿಸಲು ಚಕ್ರವ್ಯೂಹ ರಚಿಸಲು ಪ್ರಯತ್ನ ನಡೆಸಿರುವ ಕಾಂಗ್ರೆಸ್ ಬೆಂಗಳೂರಿನಲ್ಲಿ ಆಯೋಜಿಸಿರುವ ಪ್ರತಿಪಕ್ಷಗಳ ಸಭೆ ರಾಷ್ಟ್ರ ರಾಜಕಾರಣದ ವಿದ್ಯಮಾನಗಳ ಕೇಂದ್ರಬಿಂದುವಾಗಿದೆ. ಕರ್ನಾಟಕದಲ್ಲಿ ಪಡೆದ ಫಲಿತಾಂಶವನ್ನೇ 2024ರ ಚುನಾವಣೆಯಲ್ಲಿ ಪಡೆಯಲು ಕೆಲಸ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ತಾಜ್ ವೆಸ್ಟ್ಎಂಡ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಿತಾಸಕ್ತಿ ಕಾಯಲು ವಿರೋಧ ಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ ಎಂದರು. ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ನಾಳೆ (ಮಂಗಳವಾರ) ದೊಡ್ಡ ಮಟ್ಟದ ಸಭೆ ನಡೆಯಲಿದೆ. ಇದು ಕೇವಲ ಒಂದು ಪಕ್ಷದ ಸಭೆಯಲ್ಲ. ದೇಶದ 140 ಕೋಟಿ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಆಯೋಜಿಸುತ್ತಿರುವ ಈ ಸಭೆಗೆ ಕೆಪಿಸಿಸಿ ಪರವಾಗಿ ಎಲ್ಲರಿಗೂ ಸ್ವಾಗತ ಕೋರಿದ ಅವರು, ಈ ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಪಡೆದ ಫಲಿತಾಂಶವನ್ನೇ 2024ರ ಚುನಾವಣೆಯಲ್ಲಿ ಪಡೆಯಲು ಕೆಲಸ ಮಾಡಲಾಗುವುದು ಎಂದರು.























































