ಪ್ರತಿಪಕ್ಷ ನಾಯಕರ ಸಭೆಗೆ ಅಡ್ಡಿ ವಿಚಾರ: ತರಾತುರಿಯಲ್ಲೇ ಎಡವಿದರೇ ಬಿಎಸ್‌ವೈ..? ಸಮರ್ಥ ಆಡಳಿತಗಾರನ ನಿರ್ಧಾರದ ಹಿಂದಿನ ಉದ್ದೇಶ ಬಿಜೆಪಿ ನಾಯಕರಿಗೇ ತಿಳಿಯುತ್ತಿಲ್ಲ..!!
ಬೆಂಗಳೂರು: ಕೋವಿಡ್ ಪರಿಸ್ಥಿತಿಯಲ್ಲಿ ಪರಿಸ್ಥಿತಿ ಅವಲೋಕಿಸುವ ಸಂಬಂಧ ಅಧಿಕಾರಿಗಳ ಸಭೆ ನಡೆಸಲು ಮುಂದಾಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಸರ್ಕಾರ ಅಡ್ಡಗಾಲು ಹಾಕಿದೆ. ಪ್ರತಿಪಕ್ಷ ನಾಯಕರು ಕರೆದಿರುವ ಸಭೆಯಲ್ಲಿ ಭಾಗವಹಿಸದಂತೆ ಮುಖ್ಯಕಾರ್ಯದರ್ಶಿಯವರು ಡಿಸಿ, ಎಸ್ಪಿ, ಆಯುಕ್ತರು ಸಹಿತ ವಿವಿಧ ಅಧಿಕಾರಿಗಳಿಗೆ ಸೂಚಿಸಿದ್ದು ಈ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವಿನ ಗುದ್ದಾಟ ತಾರ್ಕಿಕ ಘಟ್ಟಕ್ಕೆ ತಲುಪಿದೆ.
ಸಿಎಂ ಯಡಿಯೂರಪ್ಪ ಅವರು ರಾಜ್ಯ ಕಂಡ ಅತ್ಯುತ್ತಮ ಸಂಸದೀಯ ಪಟು. ರಾಜಕೀಯ ಮುತ್ಸದ್ದಿತನದ ನಡುವಿವ ಪಯಣದುದ್ದಕ್ಕೂ ಅನುಭವದ ಹಾದಿಯಲ್ಲೇ ಸಾಗಿಬಂದವರು. ಅದಕ್ಕಿಂತಲೂ ಮುಖ್ಯವಾಗಿ ಪ್ರಶ್ನಾತೀತ ಸಮರ್ಥ ಆಡಳಿತಗಾರ. ಆದರೆ ಈ ಬಾರಿ ಪ್ರತಿಪಕ್ಷ ನಾಯಕರು ಕರೆದ ಸಭೆಯ ವಿಚಾರದಲ್ಲಿ ಬಿಎಸ್‌ವೈ ಆತುರದಿಂದ ಕೈಗೊಂಡ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಪ್ರತಿಪಕ್ಷದ ಬತ್ತಳಿಕೆ ಸೇರಿದ ಮತ್ತೊಂದು ಅಸ್ತ್ರ..?
ರಾಜ್ಯ ಸರ್ಕಾರದ ಈ ನಡೆಯಿಂದಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ದಶಕಗಳ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಸಭೆ ನಡೆಸಲು ಅವಕಾಶ ಕೊಟ್ಟಿಲ್ಲ. ಆ ಸಂದರ್ಭದಲ್ಲೂ ರಾಜಕೀಯ ವ್ಯವಸ್ಥೆಯಲ್ಲಿ ಗುದ್ದಾಟ ನಡೆದದ್ದನ್ನು ರಾಜ್ಯದ ಜನತೆ ಗಮನಿಸಿದ್ದರು. ಅನಂತರದ ಚುನಾವಣೆಯ ಫಲಿತಾಂಶ ಕೂಡಾ ಬಿಜೆಪಿಯೊಳಗೆ ಆತ್ಮಾವಲೋಕನಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಮತ್ತೆ ಅದೇ ರೀತಿಯ ಸಂಘರ್ಷಕ್ಕೆ ಸರ್ಕಾರ ಹಾದಿ ಮಾಡಿ ಕೊಟ್ಟಿದೆಯೇ ಎಂಬ ಆತಂಕ ಬಿಜೆಪಿ ಕಾರ್ಯಕರ್ತರದ್ದು.
ಸ್ಪಷ್ಟತೆ ಇಲ್ಲ ಎನ್ನುತ್ತಿರುವ ಸಂದೀಯ ಪಟುಗಳು:
ಕ್ಯಾಬಿನೆಟ್ ದರ್ಜೆ ಸ್ಥಾನಮಾನ. ಅವರದ್ದೇ ಆದ ಅಧಿಕಾರ.. ಅಧಿಕಾರಿಗಳ ಸಮೂಹವನ್ನೇ ಸರ್ಕಾರ ಕೊಟ್ಟಿದೆ.. ಹೀಗಿದ್ದರೂ ಸಭೆ ಮೂಲಕ ಮಾಹಿತಿ ಸಂಗ್ರಹ, ಸಲಹೆ ಹೊರತು ಬೇರೆ ನಡೆ ಅಸಾಧ್ಯ..!!
ಪ್ರತಿಪಕ್ಷ ನಾಯಕರು ಸಬೆ ಕರೆಯಬಾರದು ಎಂಬ ಕಾನೂನು ಇದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂಬುದು ಅನೇಕ ಸಂಸದೀಯ ಪಟುಗಳ ಅಭಿಪ್ರಾಯ. ಹೀಗಿರುವಾಗ ತರಾತುರಿಯ ತೀರ್ಮಾನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ ಎಂಬುದು ಅವರ ಪ್ರತಿಪಾದನೆ.
ಪ್ರತಿಪಕ್ಷ ನಾಯಕರಾಗಿರುವವರು ಸಾಂವಿಧಾನಿಕ ಚೌಕಟ್ಟಿನಲ್ಲಿ ಅವರದ್ದೇ ಆದ ಅಧಿಕಾರ ಹೊಂದಿದ್ದಾರೆ. ಶಕ್ತಿಸೌಧದಲ್ಲಿ ಈ ಸಂಬಂಧವಾಗಿಯೇ ಅಧಿಕಾರಿಗಳ ಸಮೂಹವನ್ನೇ ಸರ್ಕಾರ ಒದಗಿಸಿಕೊಟ್ಟು ವ್ಯವಸ್ಥೆಯನ್ನು ರೂಪಿಸಿದೆ. ಪ್ರತಿಪಕ್ಷ ನಾಯಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ಹಾಗೂ ಅಧಿಕಾರವೂ ಇದೆ ಎಂದಾದ ಮೇಲೆ ಸಭೆ ಕರೆಯಲು ಅವಕಾಶ ಇರುವುದಿಲ್ಲವೇ ಎಂಬುದು ಈ ಸಂಸದೀಯ ಪಟುಗಳ ಪ್ರಶ್ನೆ.
ಯಾವುದೇ ಕಾನೂನು ಜಾರಿಗೆ ಅವಕಾಶ ಇಲ್ಲದಿರಬಹುದು. ಆ ನಡೆಯ ಉದ್ದೇಶದಿಂದ ಪ್ರತಿಪಕ್ಷ ನಾಯಕರು ಅಧಿಕಾರಿಗಳ ಸಭೆ ಕರೆದಿದ್ದೇ ಆಗಿದ್ದರೆ, ಆ ಕುರಿತು ಸರ್ಕಾರಕ್ಜೆ ಅನುಮಾನ ಇದ್ದರೆ ಅಧಿಕಾರಿಗಳನ್ನು ಆ ಸಭೆಯಿಂದ ದೂರ ಇರಿಸಬಹುದು. ಆದರೆ ಇಲ್ಲಿ ಎಲ್ಲರಿಗೂ ತಿಳಿದಿರುವ ಸಂಗತಿ ಎಂದರೆ, ಈ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಪಕ್ಷ ನಾಯಕರಿಗೆ ಈ ಸಭೆ ಮೂಲಕ ಮಾಹಿತಿ ಸಂಗ್ರಹ ಮಾಡಬಹುದಷ್ಟೇ. ಮತ್ತು ಸಲಹೆ ನೀಡಬಹುದಷ್ಟೇ.
ಕಮಲ ಪಕ್ಷದಲ್ಲೂ ತಳಮಲ..?
ಹಿಂದೆ ಸಿಎಂ ಸಲಹೆಗಾರರೂ ಸಭೆ ನಡೆಸಿದ್ದರು.. ಸಿಎಂ ರಾಜಕೀಯ ಕಾರ್ಯದರ್ಶಿಗಳೂ ಸಭೆ ನಡೆಸಿದ್ದರು ಎಂಬ ವಾದವೂ ಕೇಳಿಬರುತ್ತಿದೆ..
ಈ ಹಿಂದೆ ರಾಜ್ಯದಲ್ಲಿ ಸರ್ಕಾರದ ವಿವಿಧ ಖಾತೆಗಳ ಸಲಹೆಗಾರರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ ಸಭೆ ಕರೆದಿರುವ ಇತಿಹಾಸ ಇದೆ. ವ್ಯವಸ್ಥೆಯಲ್ಲಿನ ಆ ಬೆಳವಣಿಗೆಗಳ ನಡುವೆ ಬಿಎಸ್‌ವೈ ಸರ್ಕಾರವು ಯೋಚಿಸದೆ ತರಾತುರಿಯ ನಿರ್ಧಾರ ಕೈಗೊಂಡಿದೆಯೇ ಎಂಬ ಅನುಮಾನ ಬಿಜೆಪಿ ನಾಯಕರನ್ನೇ ಕಾಡಿದೆ. ಇದು ಬಹುಶಃ ಮುಂದಿನ ದಿನಗಳಲ್ಲಿ ಬಿಜೆಪಿಗೇ ತಿರುಗುಬಾಣವಾಗಲಿದೆ ಎಂಬ ಆತಂಕ ಆಡಳಿತ ಪಕ್ಷೀಯರನ್ನೇ ಕಾಡಿದೆ