ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಏರಿಕೆಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬೆಲೆ ಏರಿಕೆ ಮಾಡುವ ಮೂಲಕ ಸಿದ್ದರಾಮಯ್ಯ ಸರ್ಕಾರವು ಕನ್ನಡಿಗರ ರಕ್ತ ಹೀರುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂಪುಟದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಬಸ್ ದರ 15% ಏರಿಕೆ ಮಾಡಿದೆ ಎಂದು ಟೀಕಿಸಿದ್ದಾರೆ.
ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ ನಿಮ್ಮ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆತ್ತಬೇಕು? ಎಂದು ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಅಸಮರ್ಥ ಸಿಎಂ ಸಿದ್ದರಾಮಯ್ಯ ಅವರ ದುರಾಡಳಿತದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಅನಿವಾರ್ಯ, ಆಸ್ತಿ ತೆರಿಗೆ ಏರಿಕೆ ಅನಿವಾರ್ಯ, ಮುದ್ರಾಂಕ ದರ ಏರಿಕೆ ಅನಿವಾರ್ಯ, ನೀರಿನ ದರ ಏರಿಕೆ ಅನಿವಾರ್ಯ, ಜನನ ಮರಣ ಪ್ರಮಾಣಪತ್ರ ಶುಲ್ಕ ಏರಿಕೆ ಅನಿವಾರ್ಯ, ಹಾಲಿನ ದರ ಏರಿಕೆ ಅನಿವಾರ್ಯ, ಬಸ್ ದರ ಏರಿಕೆ ಅನಿವಾರ್ಯ ಎಂದು ಬರೆದುಕೊಂಡಿರುವ ಅಶೋಕ್, ಶೀಘ್ರದಲ್ಲೇ ಕನ್ನಡಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವುದೂ ಅನಿವಾರ್ಯ ಎಂದು ಕುಟುಕಿದ್ದಾರೆ.