ಬೆಂಗಳೂರು: ಚುನಾವಣೆ ವಿಚಾರದಲ್ಲಿ ರಾಜಕೀಯ ಪಕ್ಷದ ಜೊತೆ ಸರ್ಕಾರಿ ಅಧಿಕಾರಿ ಭಾಗಿಯಾವುದು ಸರಿಯೇ..? ಇಂತಹಾ ನಡೆಗೆ ಅವಕಾಶ ಇದೆಯೇ..? ಈ ರೀತಿಯ ಪ್ರಶ್ನೆಗಳನ್ನು ರಾಜ್ಯದ ಕೆಪಿಸಿಸಿ ಕಚೇರಿಯಲ್ಲಿನ ವಿದ್ಯಮಾನವೊಂದು ಹುಟ್ಟು ಹಾಕಿದೆ.
ರಾಜ್ಯ ರಾಜಕಾರಣದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವಿನ ಗುದ್ದಾಟಕ್ಕೆ ಪರಿಷತ್ ಅಖಾಡ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಳೆದೂ-ತೂಗಿ, ತನ್ನ ಹುರಿಯಾಳುಗಳ ಯಾದಿಯನ್ನು ಪ್ರಕಟಿಸಿದೆ. ಉಮೇದುವಾರಿಕೆಗೆ ಇಂದೇ ಕೊನೆಯ ದಿನವಾಗಿದ್ದರಿಂದ ಪ್ರದೇಶ ಕಾಂಗ್ರೆಸ್ ಕಚೇರಿ ಕೂಡಾ ಇಂದು ಬಿರುಸಿನ ಚಟುವಟಿಕೆಗಳ ಕೇಂದ್ರಬಿಂದುವಾಯಿತು. ಅದೇ ಹೊತ್ತಿಗೆ ನಡೆದ ಎಡವಟ್ಟೊಂದು ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ.
ಪರಿಷತ್ ಫೈಟ್‌ನಲ್ಲಿ ಸೆಣಸಾಡುವ ಕಲಿಗಳಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ನಾಯಕರ ಉಪಸ್ಥಿತಿಯಲ್ಲಿ ‘ಬಿ-ಫಾರ್ಮ್’ ವಿತರಿಸಿದರು. ಚಿಕ್ಕಮಗಳೂರು ಜಿಲ್ಲೆಯಿಂದ ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡರಿಗೂ ಅಧಿಕೃತ ಫಾರ್ಮ್ ನೀಡಲಾಯಿತು. ಅವರಿಗಾಗಿ ಪಕ್ಷ ನೀಡಿದ್ದ ‘ಬಿ-ಫಾರ್ಮ್’ನ್ನು ಅಭ್ಯರ್ಥಿ ಅಥವಾ ಪಕ್ಷದ ಪ್ರಮುಖರು ಸ್ವೀಕರಿಸಿದ್ದರೆ ವಿವಾದವಾಗುತ್ತಿರಲಿಲ್ಲ. ಈ ‘ಬಿ-ಫಾರ್ಮ್’ನ್ನು ಗಾಯತ್ರಿ ಶಾಂತೇಗೌಡರ ಪರವಾಗಿ ಅವರ ಸಂಬಂಧಿ ಎಂದು ಹೇಳಿಕೊಂಡ ಸುನೀಲ್ ಬಿ.ಎಂ. ಎಂಬವರು ಪಡೆದಿದ್ದಾರೆ ಎಂಬ ಸಂಗತಿಯೇ ಚರ್ಚೆಗೆ ಗ್ರಾಸವಾಗಿರುವುದು.
ಯಾರಿದು ಸುನೀಲ್..? ಏನಿದು ವಿವಾದ..?
ಎ.ವಿ.ಗಾಯತ್ರಿ ಶಾಂತೇಗೌಡರಿಗಾಗಿ ಕಾಂಗ್ರೆಸ್ ನೀಡಿದ್ದ ‘ಬಿ-ಫಾರ್ಮ್’ನ್ನು ಪಡೆದಿದ್ದಾರೆ ಎನ್ನಲಾದ ವ್ಯಕ್ತಿ ಸುನೀಲ್ ಬಿ.ಎಂ. ಇವರು ರಾಜ್ಯ ಸರ್ಕಾರದ ಒಬ್ಬ ಅಧಿಕಾರಿ. ಅಬಕಾರಿ ಇಲಾಖೆಯಲ್ಲಿ ಜಾರಿ ಅಧಿಕಾರಿಯಾಗಿರುವ ಸುನೀಲ್ ಅವರು ಅಕ್ರಮಗಳನ್ನು ಬೆನ್ನತ್ತುವ ಹುದ್ದೆಯಲ್ಲಿದ್ದವರು. ಈ ಸರ್ಕಾರಿ ಅಧಿಕಾರಿಯು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪಕ್ಷವೊಂದರ ಅಭ್ಯರ್ಥಿ ಪರವಾಗಿ ಕಾರ್ಯನಿರ್ವಹಿಸಿರುವುದು ಸರಿಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿದೆ.
ಈ ಅಧಿಕಾರಿಯು ‘ಬಿ-ಫಾರ್ಮ್’ ಸ್ವೀಕರಿಸಿದರೆನ್ನಲಾದ ಫೊಟೋವನ್ನು ಕೆಪಿಸಿಸಿ ಪ್ರಮುಖರೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ಬೆಳವಣಿಗೆಯು ವಿವಾದಕ್ಕೆ ಎಡೆಮಾಡಿಕೊಟ್ಟ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆಯೇ ಆ ಪೋಸ್ಟ್ ಮಾಯವಾಗಿದೆ. ಆದರೆ ನೆಟ್ಟಿಗರು ಈ ವಿವಾದವನ್ನು ಬೆನ್ನತ್ತಿ ಸುದ್ದಿಗೆ ಮತ್ತಷ್ಟು ಗುದ್ದು ಕೊಟ್ಟಿದ್ದಾರೆ.
Sunil B M, An Enforcement officer at Karnataka Excise Dept
Receiving B Form from #CongressParty is acceptable?
Taking for Gayathri Shanthe gowda #KarnatakaMLCElection@BJP4India @AmitShah@ceo_karnataka @BJP4Karnataka @CTRavi_BJP @blsanthosh @nalinkateel @Tejasvi_Surya@BSBommai pic.twitter.com/kKAAcmyRpS— Suneel Shivananda 🇮🇳 (Modi ka Parivar) (@iamsuneelblr) November 23, 2021
ಈ ನಡುವೆ, ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಏಜೆಂಟರ ರೀತಿ ‘ಬಿ-ಫಾರ್ಮ್’ ಸ್ವೀಕರಿಸಿರುವ ಬೆಳವಣಿಗೆ ಬಗ್ಗೆ ರಾಜ್ಯದ ಪ್ರಜ್ಞಾವಂತರು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಫೊಸ್ಟ್ ಹರಿದಾಡುತ್ತಿದ್ದು ನೆಟ್ಟಿಗರು ಈ ಅಧಿಕಾರಿಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.