ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) 27ನೇ ಸಂಸ್ಥಾಪನಾ ದಿನಾಚರಣೆ ಗಮನ ಸೆಳೆಯಿತು. ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಹೊಸ ಬಸ್ಸುಗಳ ಲೋಕಾರ್ಪಣೆ ನಡೆದಿದೆ. ಅಪಘಾತ ರಹಿತ ಸೇವೆಗೈದ 43 ಚಾಲಕರಿಗೆ ‘ಸುರಕ್ಷಾ ಚಾಲಕ’ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೂತನ ಬಸ್ಸುಗಳ ಲೋಕಾರ್ಪಣೆಗೆ ಚಾಲನೆ ನೀಡಿದರು.
ಇದೇ ವೇಳೆ, ವಾಯವ್ಯ ಸಾರಿಗೆ ಸಂಪದ ಡಿಜಿಟಲ್ ತ್ರೈಮಾಸಿಕ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಜೊತೆಗೆ ಮೃತಪಟ್ಟ ಸಂಸ್ಥೆಯ ನೌಕರರ ಅವಲಂಬಿತರಿಗೆ ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯ ರೂ 5 ಲಕ್ಷ ಮೊತ್ತದ ಚೆಕ್ ವಿತರಣೆ ಮತ್ತು ಸಂಸ್ಥೆಯಲ್ಲಿ ಮೃತಪಟ್ಟ ನೌಕರರ ಅವಲಂಬಿತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ರೂ 50 ಲಕ್ಷದ ಮೊತ್ತದ ಅಪಘಾತ ವಿಮಾ ಯೋಜನೆಯ ಚೆಕ್ ವಿತರಣೆ ಮಾಡಲಾಯಿತು.
ಕೆನರಾ ಬ್ಯಾಂಕ್ ರವರೊಂದಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆಯ ಒಡಂಬಡಿಕೆ ಮಾಡಲಾಗಿದೆ. ನೌಕರರು ಭವಿಷ್ಯ ನಿಧಿ ಮುಂಗಡಕ್ಕೆ ಅರ್ಜಿ ಸಲ್ಲಿಸುವ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆ ಮೊತ್ತವನ್ನು UPI ಮೂಲಕ ಪಾವತಿಸುವ ತಂತ್ರಾಂಶಗಳಿಗೂ ಚಾಲನೆ ನೀಡಲಾಗಿದೆ.
ಜೊತೆಗೆ, ನೂತನ ಕಿರಿಯ ಸಹಾಯಕ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ಪತ್ರಗಳ ವಿತರಣೆ ಮಾಡಲಾಯಿತು. 2024-25 ನೇ ಸಾಲಿನ ಅಂತರ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳಲ್ಲಿ ವಿಜೇತರಿಗೆ ಪಾರಿತೋಷಕ ವಿತರಣೆ ಮಾಡಲಾಯಿತು. 2023-24 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ರವರು ಮತ್ತು ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಅಲಗೌಡ ಕಾಗೆ, ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ್, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷ ಶಾಕಿರ್ ಸನದಿ, ಸಂಸ್ಥೆಯ ಉಪಾಧ್ಯಕ್ಷ ಪೀರಸಾಬ್ ಅ. ಕೌತಾಳ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕ ವಿ.ಎಸ್.ಪಾಟೀಲ್, ಜಿಲ್ಲಾಧಿಕಾರಿ ದಿವ್ಯಪ್ರಭು, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾII ಗೋಪಾಲ ಎಂ.ಬ್ಯಾಕೋಡ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ.ಎಂ ಮೊದಾಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.