‘ಒಮಿಕ್ರಾನ್’ ಬಗ್ಗೆ ಜನರಿಗಿದೆ ಆತಂಕ. ಹಾಗೆಂದ ಮಾತ್ರಕ್ಕೆ ಮತ್ತೆ ಲಾಕ್‌ಡೌನ್ ಅಪ್ರಸ್ತುತ ಎಂಬುದು ಸಿಎಂ ಅಭಿಪ್ರಾಯ.. ಈ ರೀತಿಯ ಪ್ರಸ್ತಾಪವೇ ಇಲ್ಲ ಎನ್ನುತ್ತಿದ್ದಾರೆ ಮುಖ್ಯಮಂತ್ರಿ.. ಆದರೆ, ಜನ ಸೇರುವಿಕೆ ತಡೆಯಲು ಅಧಿಕಾರಿಗಳಿಗೆ ಸೂಚನೆ..
ದಾವಣಗೆರೆ: ಸರ್ಕಾರದ ಮುಂದೆ ಲಾಕ್‌ಡೌನ್ ಪ್ರಸ್ತಾವನೆ ಇಲ್ಲ. ಶಾಲಾ ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಿದ್ದು, ಅವುಗಳನ್ನು ಮುಚ್ಚಲು ತಿಳಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ರೂಪಾಂತರಿ ವೈರಸ್ ಒಮಿಕ್ರಾನ್ ಕುರಿತು ಜನತೆ ಭಯಪಡದೆ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ರೂಪಾಂತರಿ ವೈರಸ್ ಕಂಡುಬಂದಿರುವ ದೇಶಗಳಿಂದ ಬಂದಿರುವವರ ಮೇಲೆ ನಿಗಾ ಇರಿಸಿದ್ದು, ಅವರ ಸಂಪರ್ಕಿತರ ಪತ್ತೆ ಹಚ್ಚಿ ಪರೀಕ್ಷಿಸಲಾಗುತ್ತಿದೆ.ಇದಲ್ಲದೆ ವಿಮಾನ ನಿಲ್ದಾಣದಲ್ಲಿಯೂ ಕಟ್ಟುನಿಟ್ಟಿನ ಪರೀಕ್ಷೆ ಮಾಡುತ್ತಿದ್ದು, ನೆಗಟಿವ್ ಇದ್ದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಕೇರಳದಿಂದ ಆಗಮಿಸಿರುವ ವಿದ್ಯಾರ್ಥಿಗಳು ಆಗಮಿಸುವವರಿಗೆ ನೆಗೆಟಿವ್ ವರದಿ ಕಡ್ಡಾಯ ಹಾಗೂ 7 ನೇ ದಿನಕ್ಕೆ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಜನರು ಹೆಚ್ಚಾಗಿ ಗುಂಪು ಸೇರುವುದನ್ನು ತಡೆಯಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಸರ್ಕಾರ ನಿರಂತರವಾಗಿ ತಜ್ಞರು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾಲಕಾಲಕ್ಕೆ ಅವರು ನೀಡುವ ನಿರ್ದೇಶನದಂತೆ ಕ್ರಮ ವಹಿಸಲಾಗುವುದು ಎಂದರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗಳ ಪ್ರಮುಖಾಂಶಗಳು.#KarnatakaFightsCorona pic.twitter.com/2JfAFjiR07
— BJP Karnataka (@BJP4Karnataka) November 29, 2021
ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಗೆ ವಿಭಿನ್ನ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಗಾಗಿ ಐ.ಸಿ.ಎಂ.ಆರ್ ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಯಾವ ತಳಿ ಎಂದು ತಿಳಿಯಲಿದೆ ಎಂದರು.
ಬೂಸ್ಟರ್ ಡೋಸ್ ಗೆ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕೇಂದ್ರ ಸರ್ಕಾರದಿಂದ ನಿರ್ದೇಶನ ಬರಬೇಕಿದೆ. ನಮ್ಮ ಕಾಳಜಿ ಆರೋಗ್ಯ ಕಾರ್ಯಕರ್ತರದ್ದು. ಈಗಾಗಲೇ ಅವರು ಎರಡು ಡೋಸ್ ಪಡೆದು 6 ತಿಂಗಳ ಮೇಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನುಗುಣವಾಗಿ ಕ್ರಮ ವಹಿಸಲಾಗುವುದು ಎಂದರು.