ಬೆಳಗಾವಿ: ಪಶ್ಚಿಮದ ರಾಷ್ಟ್ರದಲ್ಲಿ ಹುಟ್ಟಿದ್ದರೂ ಸಹೋದರಿ ನಿವೇದಿತಾ ಭಾರತೀಯತೆಯನ್ನು ಅಪ್ಪಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದವರು ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಸ್ಮರಿಸಿದ್ದಾರೆ.
ಗೋಕಾಕ್ ನಗರದಲ್ಲಿರುವ ಜಲಸಂಪನ್ಮೂಲ ಸಚಿವರ ಗೃಹ ಕಚೇರಿಯಲ್ಲಿ ಭಗಿನಿ ನಿವೇದಿತಾ ಅವರ 153ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ತಾಯಿ ಭಾರತಾಂಬೆಯ ಪದತಲದಲ್ಲಿ ಸಮರ್ಪಿತಗೊಂಡ ಶ್ರೇಷ್ಠ ಪುಷ್ಪವೇ ಭಗಿನಿ ನಿವೇದಿತಾ ಎಂದರು.
ಭಾರತೀಯರ ಸೇವೆ ಮತ್ತು ಆಧ್ಯಾತ್ಮಿಕ ಚಿಂತನೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಂತಹಾ ಸಹೋದರಿ ನಿವೇದಿತಾ, ಸ್ವಾಮಿ ವಿವೇಕಾನಂದರ ಮಾನಸ ಪುತ್ರಿಯಾಗಿದ್ದರು. ಅವರಂತೆ ಪ್ರತಿಯೊಬ್ಬ ಮಹಿಳೆಗೂ ದೇಶದ ಮತ್ತು ಧರ್ಮದ ಬಗ್ಗೆ ಕಾಳಜಿ ಇರಬೇಕು. ಆಗ ನಮ್ಮ ದೇಶ ವಿಶ್ವಕ್ಕೇ ಮಾರ್ಗದರ್ಶನ ಮಾಡುವಂತಾಗುತ್ತದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.