ಬೆಂಗಳೂರು: ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಗುರುತಾಗಿರುವ ರಾಜಧಾನಿ ಬೆಂಗಳೂರಿನ ನಿಮ್ಹಾನ್ಸ್’ನ ಸುವರ್ಣ ಮಹೋತ್ಸವ ಸಮಾರಂಭ ಗಮನಸೆಳೆಯಿತು. ಬೆಂಗಳೂರಿನ ನಿಮ್ಹಾನ್ಸ್ ಆವರಣದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಆರೋಗ್ಯ ಸಚಿವರಾದ ಜಗತ್ ಪ್ರಕಾಶ್ ನಡ್ಡಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
President of India @rashtrapatibhvn Addresses Golden Jubilee Celebrations of #NIMHANS, Bengaluru in the presence of Shri @JPNadda, Union Health Minister and Shri @siddaramaiah, Chief Minister of Karnataka
The dedication displayed by faculty members, students and… pic.twitter.com/jGHh0XPHKf
— Ministry of Health (@MoHFW_INDIA) January 3, 2025
ಸಮಾರಂಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ನಿಮ್ಹಾನ್ಸ್ ಆಸ್ಪತ್ರೆಗಿಂತಲೂ ಮಿಗಿಲಾಗಿದೆ. ಅತ್ಯಾಧುನಿಕ ಸಂಶೋಧನೆ, ಉನ್ನತ ಮಟ್ಟದ ಆರೈಕೆ, ಸಹಾನುಭೂತಿ, ಕಾಳಜಿಯನ್ನು ಒದಗಿಸುವ ಕೇಂದ್ರವಾಗಿದೆ. ಇದು ರೋಗಿಗಳಿಗೆ ಆಶ್ರಯತಾಣ, ಕುಟುಂಬಗಳಿಗೆ ಆಶಾಕಿರಣ. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಅಕ್ಷಯಪಾತ್ರೆಯಂತಾಗಿದೆ ಎಂದರು.
1937ರಲ್ಲಿ ಆರಂಭವಾದ ನಿಮ್ಹಾನ್ಸ್ ಸಂಸ್ಥೆ ನ್ಯೂರೋಸೈಕಿಯಾಟ್ರಿಕ್ ಆರೈಕೆಯಲ್ಲಿ, ಮಾನಸಿಕ ಆರೋಗ್ಯ ನೀತಿ ರೂಪಿಸುವಲ್ಲಿ, ಸಾಮಾಜಿಕ ಆರ್ಥಿಕ ಅಡೆತಡೆಗಳನ್ನು ಲೆಕ್ಕಿಸದೆ ಅಗತ್ಯವಿರುವ ರೋಗಿಗಳಿಗೆ ಅಚಲವಾದ ಬೆಂಬಲವನ್ನು ಒದಗಿಸಲು ನಿರ್ಣಾಯಕ ಪಾತ್ರವನ್ನು ವಹಿಸಿದೆ. 1954 ರಲ್ಲಿ ಮಾನಸಿಕ ಆರೋಗ್ಯ ಸಂಸ್ಥೆ, 1974 ರಲ್ಲಿ ನಿಮ್ಹಾನ್ಸ್, ಡೀಮ್ಡ್ ವಿಶ್ವವಿದ್ಯಾಲಯ,1994 ಮತ್ತು ಈಗ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಅಭಿವೃದ್ದಿ ಹೊಂದಿದ್ದು, ಶ್ರೇಷ್ಠತೆಯ ದಾರಿದೀಪವಾಗಿದೆ ಮತ್ತು ದೇಶದ ಅತ್ಯುನ್ನತ ಸಂಸ್ಥೆಯಾಗಿ ಮುಂಚೂಣಿಯಲ್ಲಿದೆ ಎಂದರು.
ನಿಮ್ಹಾನ್ಸ್ ಸಂಸ್ಥೆಯ ಎಲ್ಲ ಪ್ರಯತ್ನಗಳಿಗೆ ವೈದ್ಯಕೀಯ ಶಿಕ್ಷಣ ಸಚಿವನಾಗಿ ಬೆಂಬಲಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೂಡ ಸದಾ ಬದ್ಧವಾಗಿದೆ. ಸಂಶೋಧನೆ ಮತ್ತು ಮೂಲಸೌಕರ್ಯಕ್ಕಾಗಿ ನಿಧಿಯನ್ನು ಹೆಚ್ಚಿಸುವುದು, ಜಾಗತಿಕ ಸಂಸ್ಥೆಗಳೊಂದಿಗೆ ಸಹಯೋಗವನ್ನು ಸುಗಮಗೊಳಿಸುವುದು, ವಿಶೇಷ ಔಟ್ರೀಚ್ ಕಾರ್ಯಕ್ರಮಗಳ ಮೂಲಕ ಮಾನಸಿಕ ಆರೋಗ್ಯ ಸೇವೆಗಳನ್ನು ಹಿಂದುಳಿದ ಪ್ರದೇಶಗಳಿಗೆ ವಿಸ್ತರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಸಚಿವರು ತಿಳಿಸಿದರು.
ನಿಮ್ಹಾನ್ಸ್ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಸಿಬ್ಬಂದಿಗೆ ಈ ಸುವರ್ಣ ಸಂದರ್ಭದಲ್ಲಿ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 50 ವರ್ಷಗಳಿಂದ ಶ್ರೇಷ್ಠತೆ ಕಾಪಾಡಿಕೊಂಡು ಬಂದು, ರಾಷ್ಟ್ರದಾದ್ಯಂತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅಸಂಖ್ಯಾತ ಜನರ ಪಾಲಿಗೆ ಆಪತ್ಬಾಂಧವವಾಗಿ ಸಂಸ್ಥೆಯು ಸಲಹಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಈ ಪರಂಪರೆಯಿಂದ ಸ್ಫೂರ್ತಿ ಪಡೆಯಬೇಕು. ನಾವೀನ್ಯತೆ, ಸಹಾನುಭೂತಿ ಮತ್ತು ಅಚಲವಾದ ಸಮರ್ಪಣೆ, ದೂರದೃಷ್ಟಿಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಶರಣ್ ಪ್ರಕಾಶ್ ಪಾಟೀಲ್ ಕರೆ ನೀಡಿದರು.
ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದ ಪ್ರಾಮುಖ್ಯತೆಗೆ, ಬದ್ಧತೆಗೆ ಹಾಗೂ ಸ್ಪೂರ್ತಿದಾಯಕವಾಗಿ ಬೆಂಬಲ ನೀಡಿರುವ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಂಸದರಾದ ಡಾ.ಸಿ.ಎನ್. ಮಂಜುನಾಥ್, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನಿಮ್ಹಾನ್ಸ್ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.