ನವದೆಹಲಿ: ಶ್ವಾಸಕೋಶದ ಕ್ಯಾನ್ಸರ್ ಅನ್ನು ನೈಜ ಸಮಯದಲ್ಲೇ ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ನೆರವಾಗುವ ಹೊಸ ಪ್ರವರ್ತಕ ರಕ್ತ ಪರೀಕ್ಷೆಯನ್ನು ಯುಕೆಯ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದೆ. ಇದರಿಂದ ರೋಗನಿರ್ಣಯದ ವಿಳಂಬ ಕಡಿಮೆಯಾಗುವ ಜೊತೆಗೆ ರೋಗಿಗಳ ಚಿಕಿತ್ಸಾ ಫಲಿತಾಂಶಗಳು ಉತ್ತಮಗೊಳ್ಳುವ ನಿರೀಕ್ಷೆ ಇದೆ.
ಫೋರಿಯರ್ ಟ್ರಾನ್ಸ್ಫಾರ್ಮ್ ಇನ್ಫ್ರಾರೆಡ್ (ಎಫ್ಟಿ–ಐಆರ್) ಮೈಕ್ರೋಸ್ಪೆಕ್ಟ್ರೋಸ್ಕೋಪಿ ತಂತ್ರವನ್ನು ಬಳಸಿ, ರೋಗಿಯ ರಕ್ತದಲ್ಲಿ ಒಂದೇ ಒಂದು ಶ್ವಾಸಕೋಶದ ಕ್ಯಾನ್ಸರ್ ಕೋಶವನ್ನೂ ಪತ್ತೆಹಚ್ಚುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಸುಧಾರಿತ ಅತಿಗೆಂಪು ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಕಂಪ್ಯೂಟರ್ ವಿಶ್ಲೇಷಣೆಯೊಂದಿಗೆ ಸಂಯೋಜಿಸಿರುವ ಈ ವಿಧಾನ, ಕ್ಯಾನ್ಸರ್ ಕೋಶಗಳ ವಿಶಿಷ್ಟ ರಾಸಾಯನಿಕ ‘ಬೆರಳಚ್ಚು’ಗಳನ್ನು ಗುರುತಿಸುತ್ತದೆ ಎಂದು ಯೂನಿವರ್ಸಿಟಿ ಹಾಸ್ಪಿಟಲ್ಸ್ ಆಫ್ ನಾರ್ತ್ ಮಿಡ್ಲ್ಯಾಂಡ್ಸ್ (ಯುಎಚ್ಎನ್ಎಂ), ಕೀಲೆ ಮತ್ತು ಲೌಬರೋ ವಿಶ್ವವಿದ್ಯಾಲಯಗಳ ಸಂಶೋಧಕರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಯುಎಚ್ಎನ್ಎಂನ ಆಂಕೊಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಮುಖ ಲೇಖಕ ಪ್ರೊ. ಜೋಸೆಪ್ ಸುಲೆ–ಸುಸೊ, “ಈ ತಂತ್ರದಿಂದ ಆರಂಭಿಕ ರೋಗನಿರ್ಣಯ, ವೈಯಕ್ತಿಕಗೊಳಿಸಿದ ಚಿಕಿತ್ಸೆ ಮತ್ತು ಕಡಿಮೆ ಆಕ್ರಮಣಕಾರಿ ಚಿಕಿತ್ಸಾ ಕ್ರಮಗಳು ಸಾಧ್ಯವಾಗಲಿವೆ. ಮುಂದಿನ ದಿನಗಳಲ್ಲಿ ಇದನ್ನು ಶ್ವಾಸಕೋಶದ ಕ್ಯಾನ್ಸರ್ಗೆ ಮಾತ್ರವಲ್ಲದೆ ಇತರೆ ಕ್ಯಾನ್ಸರ್ಗಳಿಗೂ ಅನ್ವಯಿಸಬಹುದು,” ಎಂದಿದ್ದಾರೆ.
ಪರಿಚಲಿಸುವ ಗೆಡ್ಡೆ ಕೋಶಗಳು (ಸಿಟಿಸಿ) ಗೆಡ್ಡೆಯಿಂದ ಬೇರ್ಪಟ್ಟು ರಕ್ತಪ್ರವಾಹದಲ್ಲಿ ಸಂಚರಿಸುವ ಕ್ಯಾನ್ಸರ್ ಕೋಶಗಳಾಗಿವೆ. ರೋಗದ ಪ್ರಗತಿ ಮತ್ತು ಚಿಕಿತ್ಸೆ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳಲು ಇವು ಪ್ರಮುಖ ಸುಳಿವು ನೀಡುತ್ತವೆ. ಇದೇ ಕೋಶಗಳು ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡುವುದಕ್ಕೂ ಕಾರಣವಾಗುತ್ತವೆ.
ಪ್ರಸ್ತುತ ಸಿಟಿಸಿ ಪತ್ತೆ ವಿಧಾನಗಳು ದುಬಾರಿ, ಸಂಕೀರ್ಣ ಮತ್ತು ಸಮಯ ತೆಗೆದುಕೊಳ್ಳುವವುಗಳಾಗಿದ್ದು, ಕೆಲವೊಮ್ಮೆ ಕ್ಯಾನ್ಸರ್ ಕೋಶಗಳನ್ನು ಗುರುತಿಸುವಲ್ಲಿ ವಿಫಲವಾಗುತ್ತವೆ. ಇದಕ್ಕೆ ಹೋಲಿಸಿದರೆ ಹೊಸ ವಿಧಾನ ಸರಳ ಮತ್ತು ಹೆಚ್ಚು ಕೈಗೆಟುಕುವಂತಿದೆ. ರಕ್ತದ ಮಾದರಿಯ ಮೇಲೆ ಅತಿಗೆಂಪು ಕಿರಣ ಹಾಯಿಸಿ, ಕೋಶಗಳ ರಾಸಾಯನಿಕ ಹೀರಿಕೊಳ್ಳುವ ಮಾದರಿಯನ್ನು ವಿಶ್ಲೇಷಿಸುವ ಮೂಲಕ ಸಿಟಿಸಿ ಇರುವುದನ್ನು ತ್ವರಿತವಾಗಿ ಪತ್ತೆ ಮಾಡಬಹುದು.
ಅಪ್ಲೈಡ್ ಸ್ಪೆಕ್ಟ್ರೋಸ್ಕೋಪಿ ಜರ್ನಲ್ನಲ್ಲಿ ಪ್ರಕಟವಾದ ಈ ತಂತ್ರದಲ್ಲಿ, ರೋಗಶಾಸ್ತ್ರ ಪ್ರಯೋಗಾಲಯಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಗಾಜಿನ ಸ್ಲೈಡ್ಗಳನ್ನೇ ಉಪಯೋಗಿಸಲಾಗುತ್ತದೆ. ಇದರಿಂದ ದಿನನಿತ್ಯದ ವೈದ್ಯಕೀಯ ಅಭ್ಯಾಸದಲ್ಲಿ ಈ ಪರೀಕ್ಷೆಯನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮುಂದಿನ ಹಂತದಲ್ಲಿ, ಈ ವಿಧಾನವನ್ನು ದೊಡ್ಡ ಪ್ರಮಾಣದ ರೋಗಿಗಳ ಗುಂಪಿನಲ್ಲಿ ಪರೀಕ್ಷಿಸುವ ಉದ್ದೇಶ ಸಂಶೋಧಕರದು. ಕ್ಯಾನ್ಸರ್ ಆರೈಕೆ ವ್ಯವಸ್ಥೆಯೊಳಗೆ ಸೇರಿಸಬಹುದಾದ ತ್ವರಿತ ಹಾಗೂ ಸ್ವಯಂಚಾಲಿತ ರಕ್ತ ಪರೀಕ್ಷೆಯಾಗಿ ಇದನ್ನು ರೂಪಿಸುವ ಗುರಿಯನ್ನು ತಂಡ ಹೊಂದಿದೆ.




















































