ಭಾರತದ ನಂ. 1 ಶ್ರೇಯಾಂಕದ ಚೆಸ್ ಆಟಗಾರ್ತಿ ಎಣಿಸಿರುವ ಹಾಸನದ ಬಾಲಕಿ ‘ಚಾರ್ವಿ ಎ ’ಗೆ ಸೋಮವಾರ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ’ ಸಿಗಲಿದೆ. ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಂಗಳವಾರ ಪ್ರಧಾನಿಯವರನ್ನು ಭೇಟಿಯಾಗಲಿರುವ ಚಾರ್ವಿ, ಗಣರಾಜ್ಯೋತ್ಸವದಂದು ನಡೆಯಲಿರುವ ಪರೇಡ್’ನಲ್ಲೂ ಭಾಗಿಯಾಗಲಿದ್ದಾರೆ.
ಯಾರು ಈ ಬಾಲಕಿ ‘ಚಾರ್ವಿ ’?
-
ಹಾಸನ ಮೂಲದ ಕು. ಚಾರ್ವಿ ಎ. ಅವರು 8 ವರ್ಷದೊಳಗಿನವರ ವಿಶ್ವ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ “ವಿಶ್ವ ಚೆಸ್ ಚಾಂಪಿಯನ್” ಪದಕ ಗೆದ್ದಿದ್ದಾರೆ. ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪ್ರತಿಷ್ಠಿತ ‘2022 ಚಾಂಪಿಯನ್ ಶಿಪ್’ನಲ್ಲಿ ಮೊದಲ ಸ್ಥಾನದಲ್ಲಿ ಗೆದ್ದು ಜಾಗತಿಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
-
ಕು. ಚಾರ್ವಿ, ಈ ಹಿಂದೆ, ಶ್ರೀಲಂಕಾದಲ್ಲಿ ನಡೆದ 2022 ರ ಚಾಂಪಿಯನ್ಶಿಪ್ನಲ್ಲಿ ಅವರು ಯು-8 ಕಾಮನ್ವೆಲ್ತ್ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. 2022 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಐದು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿಯನ್ನು ಗೆದ್ದಿದ್ದಾರೆ.
-
2021 ಮತ್ತು 2022 ರಲ್ಲಿ ನಡೆದ ವಿವಿಧ ಚಾಂಪಿಯನ್’ಶಿಪ್’ನ ಅಂಡರ್-7, ಅಂಡರ್-8, ಮತ್ತು ಅಂಡರ್-10 ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ಅವರು ಹೊರಹೊಮ್ಮಿದ್ದಲ್ಲದೆ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರಾಬಲ್ಯವನ್ನು ಸಣ್ಣ ಪ್ರಾಯದಲ್ಲೇ ಸಾಬೀತುಪಡಿಸಿದ್ದಾರೆ.
-
ಚಾರ್ವಿ, ಪ್ರಸ್ತುತ ಒಟ್ಟು ನಾಲ್ಕು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಹೊಂದಿದ್ದಾರೆ, ಇದು ಗಮನಾರ್ಹ ಸಾಧನೆಯಾಗಿದೆ. 2022 ರಲ್ಲಿ, ಅವರು ಆರು ಪ್ರಶಸ್ತಿಗಳನ್ನು ಗಳಿಸಿದ್ದಲ್ಲದೆ, ಕ್ರೀಡಾ ಜಗತ್ತಿನಲ್ಲಿ ದಾಖಲೆಯನ್ನು ಸ್ಥಾಪಿಸಿದರು. ಇದಲ್ಲದೆ, ಅವರು ಪ್ರಸ್ತುತ ಅಂಡರ್-8 ಮತ್ತು ಅಂಡರ್-10 ನ ಬಾಲಕಿಯರ ವಿಭಾಗದಲ್ಲಿ ಭಾರತದ ನಂ. 1 ಶ್ರೇಯಾಂಕದ ಚೆಸ್ ಆಟಗಾರ್ತಿಯಾಗಿದ್ದಾರೆ.
-
ಭಾರತದ ನಂ. 1 ಶ್ರೇಯಾಂಕದ ಚೆಸ್ ಆಟಗಾರ್ತಿ ಎಣಿಸಿದ ಬಾಲಕಿ ‘ಚಾರ್ವಿ’ಗೆ ಅಭಿನಂದನೆಗಳ ಹೂಮಳೆಯಾಗಿದೆ. ಗಣ್ಯಾತಿ ಗಣ್ಯರು ಈ ಬಾಲಕಿಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


























































