ಬೆಂಗಳೂರು: ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮೊಳಗಿದೆ ಎನ್ನಲಾದ ಆರೋಪ ಆಡಳಿತ ಪ್ರತಿಪಕ್ಷಗಳ ನಡುವಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಸಂಜೆ ಪ್ರಕಟವಾಗುತ್ತಿದ್ದಂತೆಯೇ ದೇಶ ದ್ರೋಹದ ಘಷಣೆ ಮೊಳಗಿದೆ ಎಂಬ ಆರೋಪ ಪ್ರತಿಧ್ವನಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವು ಸಾಧಿಸುತ್ತಿದ್ದಂತೆಯೇ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಮೊಳಗಿದೆ ಎಂಬುದು ಆರೋಪ. ಈ ಕುರಿತ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಬಿಜೆಪಿ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ಬಂಧನಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು.
ಈ ನಡುವೆ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ ಸಯ್ಯದ್ ನಾಸಿರ್ ಹುಸೇನ್ ಅವರು ಆರೋಪ ಕುರಿತಂತೆ ಪ್ರತಿಕ್ರಿಯಿಸಿ, “ಕಾಂಗ್ರೆಸ್ ಜಿಂದಾಬಾದ್, ನಾಸಿರ್ ಹುಸೇನ್ ಜಿಂದಾಬಾದ್ ಎಂದು ಘೋಷಣೆಯನ್ನಷ್ಟೇ ನಾನು ಕೇಳಿದ್ದೇನೆ. ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ನಾನು ಕೇಳಿಲ್ಲ. ಆ ರೀತಿ ಕೂಗಿರುವುದು ನನಗೆ ಕೇಳಿಸಿಲ್ಲ. ಹಾಗೆ ಯಾರಾದರೂ ಘೋಷಣೆ ಕೂಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ” ಎಂದು ಹೇಳಿದ್ದಾರೆ. .
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪದ ವಿಚಾರವಾಗಿ ನಾಸಿರ್ ಹುಸೇನ್ ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
Clarification on today's incident pic.twitter.com/cJuiYCU3H1
— Dr Syed Naseer Hussain,MP Rajya Sabha (@NasirHussainINC) February 27, 2024