ಬೆಂಗಳೂರು: ಕಲಬುರ್ಗಿಯ ಲೂಟಿ ಗ್ಯಾಂಗ್ ಖರ್ಗೆ ಅಂಗಡಿಯನ್ನು ನೀವು ಬಂದ್ ಮಾಡಿದ್ದೀರಿ. ಕಳೆದ 50 ವರ್ಷಗಳಲ್ಲಿ ಖರ್ಗೆ ಗ್ಯಾಂಗ್ ಲೂಟಿ ಗ್ಯಾಂಗ್ ಆಗಿತ್ತು. ಕಲಬುರ್ಗಿಯನ್ನು ಲೂಟಿ ಮಾಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ 7 ಸ್ಥಾನ ಇದ್ದ ಕಲಬುರ್ಗಿ ಪಾಲಿಕೆಯಲ್ಲಿ ಈಗ 24 ಸೀಟುಗಳಿವೆ. ಅದಕ್ಕಾಗಿ ಗುಲ್ಬರ್ಗದ ಜನರಿಗೆ ಅಭಿನಂದನೆಗಳು. ದೊಡ್ಡ ಖರ್ಗೆಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದೀರಿ. ನಗರಪಾಲಿಕೆ ಚುನಾವಣೆಯಲ್ಲಿ ಸಣ್ಣ ಖರ್ಗೆಂiÀiನ್ನು ಊರು ಬಿಡಿಸಿದ್ದೀರಿ. ನಿಮಗೆ ಅಭಿನಂದನೆಗಳು ಎಂದರು.
ಕಲಬುರ್ಗಿಯ ಲೂಟಿಗ್ಯಾಂಗ್ ಮಲ್ಲಿಕಾರ್ಜುನ ಖರ್ಗೆಯವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ಖರ್ಗೆ ಕುಟುಂಬಕ್ಕೆ ಕಲಬುರ್ಗಿಯ ಜನತೆ ಸರಿಯಾದ ಪಾಠ ಕಲಿಸಿದ್ದಾರೆ.#ಜನಸ್ವರಾಜ್ #JanSwaraj #NalinSpeaks pic.twitter.com/PWLagzmaQL
— BJP Karnataka (@BJP4Karnataka) November 20, 2021
ಈ ಚುನಾವಣೆಯಲ್ಲಿ ಖರ್ಗೆ ಅಂಗಡಿ ಬಂದ್ ಮಾಡಿ ಬಿ.ಜಿ.ಪಾಟೀಲರನ್ನು ನೀವು ಗೆಲ್ಲಿಸುವ ವಿಶ್ವಾಸ ಇದೆ ಎಂದು ತಿಳಿಸಿದರು. ಗ್ರಾಮಸ್ವರಾಜ್ಯದ ಮೂಲಕ ಭಾರತ ರಾಮರಾಜ್ಯವಾಗಬೇಕೆಂಬ ಕನಸನ್ನು ಮಹಾತ್ಮ ಗಾಂಧೀಜಿ ಕಂಡಿದ್ದರು. ಗ್ರಾಮಗಳ ಉದ್ಧಾರದ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಗಾಂಧೀಜಿ ಕಂಡರೆ, ಗಾಂಧಿ ಟೋಪಿ ಇಟ್ಟುಕೊಂಡು ಕಾಂಗ್ರೆಸ್ಸಿಗರು ಅಂಗಡಿ ತೆರೆದರು. ಅಂಗಡಿಯಲ್ಲಿ ವ್ಯಾಪಾರ ಮಾಡಿದ ಕಾಂಗ್ರೆಸ್ಸಿಗರು ಕುಟುಂಬ ಅಭಿವೃದ್ಧಿ ಮಾಡಿದರು. ಆದರೆ, ನರೇಂದ್ರ ಮೋದಿಯವರು ದೇಶದ ಉದ್ಧಾರ- ಅಭಿವೃದ್ಧಿಗಾಗಿ ಶ್ರಮಿಸಿದರು ಎಂದು ತಿಳಿಸಿದರು.
2014ರವರೆಗೆ ಈ ದೇಶದಲ್ಲಿ ಗ್ರಾಮ ಪಂಚಾಯತ್‍ಗಳಿಗೆ ನೇರ ಅನುದಾನ ಇರಲಿಲ್ಲ. ಪ್ರತಿ ಪಂಚಾಯಿತಿಗೆ 1 ಕೋಟಿ ರೂಪಾಯಿ ಅನುದಾನ ಕೊಟ್ಟ ಪುಣ್ಯಾತ್ಮ ಇದ್ದರೆ ಅದು ನರೇಂದ್ರ ಮೋದಿ ಎಂದು ಅವರು ತಿಳಿಸಿದರು. ಸಂಸದರಿಗೂ ಆದರ್ಶ ಗ್ರಾಮಗಳ ಪರಿಕಲ್ಪನೆಯನ್ನು ಅವರು ಜಾರಿಗೊಳಿಸಿದ್ದಾರೆ ಎಂದು ವಿವರಿಸಿದರು.
ಪಂಚಾಯತ್‍ಗಳಿಗೆ ಇಂಟರ್‍ನೆಟ್ ಸಂಪರ್ಕ, ವಿದ್ಯುತ್ ಇಲ್ಲದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಯಿತು. ನರೇಗಾ ಯೋಜನೆಯಡಿ ಪಂಚಾಯತ್‍ಗಳಿಗೆ ನೇರ ಅನುದಾನ ನೀಡಿದ ಶ್ರೇಷ್ಠ ವ್ಯಕ್ತಿ ಮೋದಿಯವರು ಎಂದರು.
ಮನೆಮನೆಗೆ ಗಂಗೆ ಮೂಲಕ ನೀರು ಒದಗಿಸಿದ್ದು, ಶೌಚಾಲಯಗಳ ನಿರ್ಮಾಣ, ಸ್ಮಾರ್ಟ್ ಸಿಟಿಯಡಿ ನಗರಗಳ ಅಭಿವೃದ್ಧಿ ಮಾಡಿದ್ದು ನರೇಂದ್ರ ಮೋದಿಯವರು. ಯಡಿಯೂರಪ್ಪ ಅವರು ಸ್ವರ್ಣ ಗ್ರಾಮ ಮತ್ತಿತರ ಯೋಜನೆ ಅನುಷ್ಠಾನ ಮಾಡಿದರೆ, ಬಸವರಾಜ ಬೊಮ್ಮಾಯಿಯವರು ಅಮೃತ ಯೋಜನೆ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮುಂದಿನ ಬಾರಿ 5,500 ಪಂಚಾಯತ್‍ಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ವಿವರಿಸಿದರು.
ಮುಂದಿನ 7 ತಿಂಗಳುಗಳಲ್ಲಿ 5 ಲಕ್ಷ ಮನೆಗಳನ್ನು ಬಡವರಿಗೆ ನೀಡಲಾಗುವುದು. ಪಂಚಾಯತ್ ಸದಸ್ಯರಿಗೆ ಗೌರವಧನ ಕೊಡಲಾಗಿದೆ. ಯಡಿಯೂರಪ್ಪ ಈ ಕಾರ್ಯ ಮಾಡಿದ್ದಾರೆ. ಕೇರಳ ಮಾದರಿಯಲ್ಲಿ ಅನುದಾನ, ಸೌಲಭ್ಯ, ಗೌರವಧನ 10 ಸಾವಿರಕ್ಕೆ ಶಿಫಾರಸು ಮಾಡಿದ್ದೇನೆ ಎಂದು ತಿಳಿಸಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅತ್ಯಂತ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ರಾಜ್ಯದಲ್ಲಿ ರಸ್ತೆಗಳಲ್ಲಿ ಹಿಂದೂಗಳ ಹತ್ಯೆ ಆಗಿಲ್ಲ, ಗೋಹತ್ಯೆ ನಡೆಯುತ್ತಿಲ್ಲ; ಬಾಂಬ್ ಸ್ಫೋಟ ಆಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್‍ನವರಿಗೆ ಹುಚ್ಚು ಹಿಡಿದಿದೆ. ಹುಚ್ಚಿನಿಂದ ಅವರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಚುನಾಯಿತ ಪ್ರತಿನಿಧಿಗಳ ಹಕ್ಕು ಮತ್ತು ಜವಾಬ್ದಾರಿಯನ್ನು ನೆನಪಿಸುವುದು, ಸರಕಾರವು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಅನುದಾನ ಹಾಗೂ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸುವುದು ಈ ಸಮಾವೇಶದ ಉದ್ದೇಶ. ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಪಡೆಯುವ ಉದ್ದೇಶ ಈ ಯಾತ್ರೆಯ ಹಿಂದಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಕೇಂದ್ರ ಸಚಿವರಾದ ಭಗವಂತ ಖೂಬಾ, ರಾಜ್ಯದ ಸಚಿವರಾದ ಅರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ, ಸಂಸದರಾದ ಉಮೇಶ್ ಜಾಧವ್, ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೋಡ್, ಸುಭಾಷ್ ಗುತ್ತೆದಾರ್, ಅವಿನಾಶ್ ಜಾಧವ್, ಎನ್.ಮಹೇಶ್, ವಿಧಾನಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶಿಲ್ ನಮೋಶಿ, ಸುನಿಲ್ ವಲ್ಯಾಪುರೆ, ಅಮರನಾಥ್ ಪಾಟೀಲ್, ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಕೇಶವ್ ಪ್ರಸಾದ್, ವಿಭಾಗ ಪ್ರಭಾರಿಗಳಾದ ಈಶ್ವರ್ ಸಿಂಗ್ ಠಾಕೂರ್, ಕಲಬುರಗಿ ನಗರ ಜಿಲ್ಲಾಧ್ಯಕ್ಷರಾದ ಸಿದ್ದಾಜಿ ಎಸ್. ಪಾಟೀಲ್, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಿ, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.