ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಧ್ವನಿಯನ್ನು ಹೋಲುವಂತಹಾ ಆಡಿಯೋ ವೈರಲ್ ಬಗ್ಗೆ ಸಚಿವ ಈಶ್ವರಪ್ಪ ಜಾಣತನದ ಪ್ರತಿಕ್ರಿಯೆ ನೀಡಿದ್ದಾರೆ. ನಳಿನ್ ಕುಮಾರ್ ಬಗ್ಗೆ ತನಿಖೆ ಬೇಡ ಎಂದ ಅವರು ಆಡಿಯೋ ವೈರಲ್ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಬಗೆಗಿನ ಸುದ್ದಿ ಬಿಜೆಪಿ ನಾಯಕರನ್ನು ತಳಮಳಕ್ಕೀಡು ಮಡಾಡಿದೆ. ಈ ಕುರಿತಂತೆ ಬೆಳಿಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ‘ಆಡಿಯೋ ತನ್ನದಲ್ಲ ಎಂದು ನಳಿನ್ ಕುಮಾರ್ ಹೇಳಿದ್ದಾರೆ. ಹೀಗಾಗಿ ನಳಿನ್ ಕುಮಾರ್ ಬಗ್ಗೆ ತನಿಖೆ ಅಗತ್ಯವಿಲ್ಲ’ ಎಂದರು. ನಳೀನ್ ಕುಮಾರ್ ಕಟೀಲು ಅವರನ್ನು ಈ ವಿಷಯದಲ್ಲಿ ಬಲಿಪಶು ಮಾಡಬೇಡಿ ಎಂದವರು ಹೇಳಿದರು.
ಆದರೆ, ‘ಯಾರೋ ಹುಚ್ಚರು ಹೀಗೆ ಮಾಡಿದ್ದಾರೆ. ಯಾರೋ ಆಡಿಯೋವನ್ನು ಸೃಷ್ಟಿ ಮಾಡಿದ್ದಾರೆ. ಆಡಿಯೋ ಯಾರು ವೈರಲ್ ಮಾಡಿದ್ದಾರೆ’ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಕಚೇರಿಯಲ್ಲೂ ಆಡಿಯೋ ಪ್ರತಿಧ್ವನಿ:
ಈ ನಡುವೆ, ಆಡಿಯೋ ವಿವಾದ ಬಗ್ಗೆ ಈಶ್ವರಪ್ಪ ಮಾತಿನಲ್ಲಿ ನಳಿನ್ ಕುರಿತ ಅಸಮಾಧಾನ ಪ್ರತಿಧ್ವನಿಸಿದಂತಿದೆ. ನಳಿನ್ ಅವರ ಸ್ಪಷ್ಟನೆ ಹಿನ್ನೆಲೆಯಲ್ಲಿ ಅವರ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದಿರುವ ಈಶ್ವರಪ್ಪ, ಆಡಿಯೋ ವೈರಲ್ ಬಗ್ಗೆ ತನಿಖೆಯ ಅಗತ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ತನಿಖೆ ನಡೆದರೂ ಸಂಕಷ್ಟಕ್ಕೆ ಸಿಲುಕುವುದು ನಳಿನ್ ಕುಮಾರ್ ಎಂಬುದು ಪಕ್ಷದ ಪ್ರಮುಖರ ಅಭಿಪ್ರಾಯ.