ಬೆಂಗಳೂರು: ನಾಗಮಂಗಲ ಗಲಭೆಯನ್ನು ಖಂಡಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕರ್ನಾಟಕಕ್ಕೂ ಬುಲ್ಡೋಜರ್ ಕಾರ್ಯಾಚರಣೆ ಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.
ನಾಗಮಂಗಲ ಗಲಭೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು ರಾಜ್ಯ ಸರ್ಕಾರದ ನಡೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಮತಾಂಧರು ನಡೆಸಿದ ಕೋಮುದಳ್ಳುರಿಯಲ್ಲಿ ಅಂಗಡಿ, ಮುಂಗಟ್ಟು, ಸರಕು-ಸರಂಜಾಮು ಸೇರಿದಂತೆ ಒಟ್ಟು ಸುಮಾರು 25 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ, ವಾಹನಗಳಿಗೆ ಬೆಂಕಿ ಹಚ್ಚುವುದು, ಶೋರೂಂಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮುಂತಾದ ದುಷ್ಕೃತ್ಯ ಎಸಗಿದ ಪುಂಡರನ್ನು ಪತ್ತೆ ಹಚ್ಚಿ, ಉತ್ತರ ಪ್ರದೇಶದ ಮಾದರಿಯಲ್ಲಿ ಅವರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಮಾಡಿದರೆ ಮಾತ್ರ ಇಂತಹವರಿಗೆ ತಕ್ಕ ಪಾಠ ಕಲಿಸಲು ಸಾಧ್ಯ. ಇಂತಹ ವಿಕೃತ ಮನಸ್ಥಿತಿಗೆ ಪೂರ್ಣವಿರಾಮ ಇಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾಗರಿಕರನ್ನು ರಕ್ಷಿಸಬೇಕಾದ ಸರ್ಕಾರವೇ ಪೂರ್ವ ನಿಯೋಜಿತ ಕೋಮು ಗಲಭೆಯನ್ನು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ನಿರ್ಲಕ್ಷ್ಯ ಮಾಡಿದರೆ ಜನ ಸಾಮಾನ್ಯರ ರಕ್ಷಣೆ ಮಾಡುವವರು ಯಾರು? ಜನಸಾಮಾನ್ಯರು ನೆಮ್ಮದಿಯಿಂದ ತಮ್ಮ ಉದ್ಯೋಗ, ವ್ಯಾಪಾರ ಮಾಡುವುದಾದರೂ ಹೇಗೆ? ಎಂದು ಆರ್.ಅಶೋಕ ಪ್ರಶ್ನಿಸಿದ್ದಾರೆ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ನಮ್ಮ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಎಂಬುದೇ ಆಕಸ್ಮಿಕ, ಅಪರೂಪವಾಗುವ ದಿನ ಬಹಳ ದೂರವಿಲ್ಲ ಎಂದು ಅವರು ಹೇಳಿದ್ದಾರೆ.