ಢಾಕಾ: ಬಾಂಗ್ಲಾದೇಶದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಕಾರ್ಯಕರ್ತರ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಹಿಂಸಾಚಾರ ಉಲ್ಬಣಗೊಂಡಿದೆ. ಹತ್ತಕ್ಕೂ ಹೆಚ್ಚು ನಗರಗಳಿಗೆ ಹಿಂಸಾಚಾರ ವ್ಯಾಪಿಸಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಬಾಂಗ್ಲಾ ದೇಶದ ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರು ಹಾಗೂ ಪ್ರತಿಭಟನಾಕಾರರ ನಡುವೆ ಹೊಡೆದಾಟ ಬಡಿದಾಟವೇ ನಡೆದಿದೆ. ಉದ್ಯೋಗ ಮೀಸಲಾತಿ ಸಹಿತ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ವಿದ್ಯಾರ್ಥಿಗಳು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರು ಹಲವು ದಿನಗಳಿಂದ ಪ್ರತಿಭಟನೆ ನಡೆಸಿತ್ತಿದ್ದಾರೆ.
ಪ್ರಧಾನಿ ಶೇಕ್ ಹಸೀನಾ ರಾಜೀನಾಮೆಗೂ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರು ಅಖಾಡಕ್ಕಿಳಿದಿದ್ದು ಉಭಯ ಗುಂಪುಗಳ ನಡುವೆ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಅವಾಮಿ ಲೀಗ್ ನ ಬೆಂಬಲಿಗರು, ಛಾತ್ರಾ ಲೀಗ್ ಹಾಗೂ ಜುಬೋ ಲೀಗ್ ಕಾರ್ಯಕರ್ತರ ನಡುವೆ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಹಾಗೂ ಸೇನಾಪಡೆ ಶತಪ್ರಯತ್ನ ನಡೆಸುತ್ತಿದೆ.