ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಗ್ಯಾರೆಂಟಿ ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ನಿಗಮಕ್ಕೆ ಶಕ್ತಿ ತುಂಬಿದ್ದರೆ, ಇನ್ನೊಂದೆಡೆ ಆರ್ಥಿಕ ಹೊರೆಯನ್ನು ತಗ್ಗಿಸುವ ಸಂಬಂಧ ರಾಜ್ಯ ಸರ್ಕಾರ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ. ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು ರಾಜ್ಯ ಸಾರಿಗೆ ಸಂಸ್ಥೆಗಳಿಗೆ 2023-24 ಸಾಲಿನ ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡಿದೆ. ಇದರಿಂದಾಗಿ KSRTC ಸಹಿತ ಸಾರಿಗೆ ನಿಗಮಗಳಿಗೆ ವಾರ್ಷಿಕ ರೂ. 541.87 ಕೋಟಿಗಳ ಪಾವತಿಯಿಂದ ವಿನಾಯಿತಿ ಸಿಗಲಿದೆ.
ಹಿಂದಿನ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಸುಮಾರು 14000 ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ನಿಗಮಗಳಿಗೆ ಸರ್ಕಾರ 9000 ಕೋಟಿ ರೂಪಾಯಿ ಅನುದಾನ ನೀಡಿತ್ತು. ಆದರೂ ಸುಮಾರು 5000 ಕೋಟಿ ರೂಪಾಯಿ ನಷ್ಟದ ಹೊರೆ ಬಾಕಿ ಇತ್ತು.
KSRTC ನಿಗಮಗಳ ಪರಿಸ್ಥಿಯನ್ನು ಮನಗಂಡ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನಿಗಮಕ್ಕಿರುವ ಆರ್ಥಿಕ ಹೊರೆ ತಗ್ಗಿಸಲು ತಮ್ಮದೇ ಆದ ಕಸರತ್ತು ನಡೆಸಿದ್ದಾರೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಲು ಪಣತೊಟ್ಟ ಸಚಿವರು ಹಲವು ಕ್ರಮಗಳನ್ನು ಜಾರಿಗೆ ತಂದಿದ್ದು, ಜೊತೆಗೆ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಗಮನಕ್ಕೂ ತಂದಿದ್ದಾರೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಹಲವು ಸಭೆಗಳಲ್ಲೂ ಆರ್ಥಿಕ ನಷ್ಟದಿಂದ ಸಾರಿಗೆ ನಿಗಮಗಳನ್ನು ಪಾರು ಮಾಡಲು ಕೆಲವು ಪ್ರಸ್ತಾವಣೆಗಳನ್ನೂ ಮುಂದಿಟ್ಟರು. ಈ ಪೈಕಿ ತೆರಿಗೆ ವಿನಾಯಿತಿಯ ಪ್ರಸ್ತಾಪ ಮಹತ್ವದ್ದಾಗಿತ್ತು.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಪ್ರಸ್ತಾವನೆ ಬಗ್ಗೆ ಪರಿಶೀಲನೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಆಶಾದಾಯಕ ಕ್ರಮ ಕೈಗೊಂಡಿದ್ದಾರೆ. ಸಚಿವ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗಿದ್ದು ಈ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಅವರ ಪ್ರಯತ್ನವೂ ಸಾಕಾರಗೊಂಡಂತಾಗಿದೆ. ಇದರಿಂದಾಗಿ KSRTC ಸಹಿತ ಸಾರಿಗೆ ನಿಗಮಗಳಿಗೆ ವಾರ್ಷಿಕ ರೂ. 541.87 ಕೋಟಿಗಳ ಪಾವತಿಯಿಂದ ವಿನಾಯಿತಿ ಸಿಗಲಿದೆ.
ಸಂಭವನೀಯ ತೆರಿಗೆ ವಿನಾಯಿತಿ ಹಂಚಿಕೆ:
KSRTC : 243.52 ಕೋಟಿ ರೂ BMTC : 119.88 ಕೋಟಿ ರೂ NWKRTC: 103.91 ಕೋಟಿ ರೂ KKRTC : 114.16 ಕೋಟಿ ರೂ
ಈ ನಡುವೆ, ರಾಜ್ಯ ಸರ್ಕಾರದ ಈ ನಡೆಯಿಂದಾಗಿ ಸಾರಿಗೆ ನಿಗಮಗಳು ಪ್ರತಿ ವರ್ಷ ತನ್ನ ಸಾರಿಗೆ ಆದಾಯದ ಮೇಲೆ ಶೇಕಡಾ 5.55ರಷ್ಟು ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ ಪಡೆಯುವಂತಾಗಿದೆ.
ನೌಕರ ವೃಂದವೂ ಖುಷ್..!
ಶಕ್ತಿ ಯೋಜನೆ ಜಾರಿ ನಂತರ KSRTC ಸಹಿತ ಸಾರಿಗೆ ನಿಗಮಗಳ ನೌಕರರ ವೇತನ ಪಾವತಿಯೂ ಸುಗಮವಾಗಿದೆ. ವಿಮಾ ಯೋಜನೆಯೂ ನೌಕರರ ಪಾಲಿಗೆ ಆಶಾದಾಯಕ ಬೆಳವಣಿಗೆ. ಅನೇಕ ಸುಧಾರಣಾ ಕ್ರಮಗಳಿಗೆ ಮುನ್ನುಡಿ ಬರೆದಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಇದೀಗ ತೆರಿಗೆ ವಿನಾಯ್ತಿ ವಿಚಾರದಲ್ಲೂ ಚಾಣಾಕ್ಷ ನಡೆ ಅನುಸರಿಸಿದ್ದಾರೆ ಎಂದು ನಿಗಮದ ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ.