ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ NDA ಪ್ರಯತ್ನಕ್ಕೆ ಬಿಜೆಪಿಯಲ್ಲಿನ ಭಿನ್ನಮತ ಸವಾಲಾಗುವ ಸಾಧ್ಯತೆಗಳಿವೆ. ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆ ತಟ್ಟಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಮಾಡಿರುವ ಘೋಷಣೆಯಿಂದಾಗಿ ಕಮಲಾ ಪಾಳಯದಲ್ಲಿ ತಳಮಳ ಉಂಟಾಗಿದೆ.
ತಮ್ಮ ಪುತ್ರ ಕಾಂತೇಶ್ ಅವರು ಹಾವೇರಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸಿದೆ. ಇದಕ್ಕೆ ಯಡಿಯೂರಪ್ಪ ಅವರೇ ಕಾರಣ ಎಂದು ಸಿಟ್ಟಿಗೆದ್ದಿರುವ ಈಶ್ವರಪ್ಪ ಅವರು BSY ಪುತ್ರ ರಾಘವೇಂದ್ರ ವಿರುದ್ಧವೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಕೆ.ಎಸ್. ಈಶ್ವರಪ್ಪ ಅವರನ್ನು ಸಮಾಧಾನ ಪಡಿಸಲು ಹಿರಿಯ ನಾಯಕರು ಹರಸಾಹಸ ನಡೆಸುತ್ತಿದ್ದು, ನಾಯಕರು ದಂಡು-ದಂಡಾಗಿ ಕೆ.ಎಸ್. ಈಶ್ವರಪ್ಪ ನಿವಾಸಕ್ಕೆ ದೌಡಾಯಿಸಿದ್ದಾರೆ. ಆದರೆ ಸಂಧಾನಕ್ಕೆ ಒಪ್ಪದ ಈಶ್ವರಪ್ಪ ಅವರು ನಾಯಕರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಈಶ್ವರಪ್ಪ ಅವರು ನಾಯಕರ ಭೇಟಿಗೆ ಒಪ್ಪದಿರುವುದು ಬಿಜೆಪಿಯಲ್ಲಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಈ ನಡುವೆ, ಬಂಡಾಯ ಎದ್ದಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಮನವೊಲಿಸಲು ಪ್ರಧಾನಿ ಮೋದಿಯವರೇ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದೆ. ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಅಚ್ಚರಿಯ ಪ್ರಸಂಗ ನಡೆಯಿತು.
ಸುದ್ದಿಗೋಷ್ಠಿಗೆ ಕುಳಿತುಕೊಂಡಿದ್ದೇ ತಡ, ಈಶ್ವರಪ್ಪ ಅವರ ಮೊಬೈಲ್ ರಿಂಗ್ ಆಗಿದೆ. ಕರೆ ಸ್ವೀಕರಿಸಿದ ಈಶ್ವರಪ್ಪ ಅವರಿಗೆ ನಾಳೆ ಮೋದಿ ಅವರು ನಿಮ್ಮ ನಿವಾಸಕ್ಕೆ ಭೇಟಿ ನೀಡುತ್ತಾರಾ ಎಂದು ಕೇಳಿದ್ದಾರೆ. ಇದಕ್ಕೆ, ಯಾರು ಹೇಳಿದ್ದು ಎಂದು ಈಶ್ವರಪ್ಪ ಪ್ರಶ್ನಿಸುತ್ತಾರೆ. ಟಿವಿಯಲ್ಲಿ ಆ ರೀತಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಈಶ್ವರಪ್ಪ, ಇಲ್ಲ ಬರುವುದಿಲ್ಲ ಎಂದಿದ್ದಾರೆ. ಒಂದು ವೇಳೆ ಮೋದಿ ನಿಮ್ಮ ನಿವಾಸಕ್ಕೆ ಬಂದರೆ ಹಾವೇರಿ ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಹೇಳುವಂತೆ ಮನವಿ ಮಾಡಿದರೆ ಏನು ಮಾಡ್ತೀರಿ ಎಂದು ಆ ವ್ಯಕ್ತಿ ಪ್ರಶ್ನಿಸಿದ್ದಾರೆ. ಆಗ ಮೋದಿ ನಮ್ಮ ಮನೆಗೆ ಬರುವುದಿಲ್ಲ, ಗ್ಯಾರಂಟಿ ಎಂದು ಹೇಳಿ ಈಶ್ವರಪ್ಪ ಅವರು ಫೋನ್ ಕಾಲ್ ಕಟ್ ಮಾಡಿದ್ದಾರೆ.