ಶಿವಮೊಗ್ಗ: ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ, ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ವಿಚಾರದಲ್ಲಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಅದಕ್ಕೂ ಮುನ್ನ ಅವರು ಕೇವಿಯಟ್ ಸಲ್ಲಿಸಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಪುತ್ರನಿಗೆ ಟಿಕೆಟ್ ಸಿಗದಿರುವುದರಿಂದ ಸಿಟ್ಟಾಗಿರುವ ಈಶ್ವರಪ್ಪ ಅವರು ತಾವೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಮೋದಿಯವರೇ ತಮ್ಮ ರೋಲ್ ಮಾಡೆಲ್ ಎನ್ನುತ್ತಿರುವ ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಪುತ್ರ ರಾಘವೇಂದ್ರ, ಮೋದಿ ಭಾವಚಿತ್ರ ಬಳಕೆಗೂ ಆಕ್ಷೇಪಿಸಿದ್ದಾರೆ. ಈ ಬೆಳವಣಿಗೆಯಿಂದ ಗಲಿಬಿಲಿಗೊಂಡಿರುವ ಈಶ್ವರಪ್ಪ, ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರಿ ಮೋದಿಯವರ ಫೋಟೋ ಬಳಸುವುದಕ್ಕೆ ಯಾರೂ ಅಡ್ಡಿಯಾಗಬಾರದೆಂಬ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಶುಕ್ರವಾರ ಅವರು ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ.