ಬೆಂಗಳೂರು: ಶಾಸಕ ಸಿ.ಟಿ.ರವಿ ಅವರನ್ನು ಬಂಧಿಸಿರುವ ಪೊಲೀಸ್ ಕ್ರಮವನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತುರ್ತು ಪರಿಸ್ಥಿತಿ ಹೇರಿದ ಕುಖ್ಯಾತಿಯ ಕಾಂಗ್ರೆಸ್, ಕರ್ನಾಟಕದಲ್ಲಿ ಇದೀಗ ಪರೋಕ್ಷ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ ಎಂದು ದೂರಿದ್ದಾರೆ. ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಇದೇ ವೇಳೆ, ಸಿ.ಟಿ.ರವಿ ಬಂಧನ ಖಂಡಿಸಿ ಶುಕ್ರವಾರ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.
‘ಪ್ರಜಾಪ್ರಭುತ್ವ ದೇಗುಲ’ವೆನಿಸಿರುವ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ದುಷ್ಕೃತ್ಯ ನಡೆಸಲು ಪ್ರಚೋದಿಸಿ ಇದೀಗ ಹಲ್ಲೆ ಯತ್ನಕ್ಕೊಳಗಾದ ನಮ್ಮ ಹಿರಿಯ ಶಾಸಕ ಸಿ.ಟಿ.ರವಿ ಅವರನ್ನೇ ಬಂಧಿಸಿ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗೂಂಡಾ ಸಾಮ್ರಾಜ್ಯವನ್ನು ನಿರ್ಮಿಸುತ್ತಿದೆ ಎಂದು ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುರ್ತು ಪರಿಸ್ಥಿತಿ ಹೇರಿದ ಕುಖ್ಯಾತಿಯ ಕಾಂಗ್ರೆಸ್,ಕರ್ನಾಟಕದಲ್ಲಿ ಇದೀಗ ಪರೋಕ್ಷ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ,
‘ಪ್ರಜಾಪ್ರಭುತ್ವ ದೇಗುಲ’ವೆನಿಸಿರುವ
ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ದುಷ್ಕೃತ್ಯ ನಡೆಸಲು ಪ್ರಚೋದಿಸಿ ಇದೀಗ ಹಲ್ಲೆ ಯತ್ನಕ್ಕೊಳಗಾದ ನಮ್ಮ ಹಿರಿಯ ಶಾಸಕ @CTRavi_BJP…— Vijayendra Yediyurappa (@BYVijayendra) December 19, 2024
ಸದನದ ಒಳಗಿನ ಘಟನೆಯನ್ನು ಉಲ್ಲೇಖಿಸಿ ದೂರು ಪಡೆದುಕೊಂಡು ಸಿ.ಟಿ.ರವಿ ಅವರನ್ನು ಬಂಧಿಸಿರುವ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುಣಿಕೆ ಬಿಗಿಯುವ ಸರ್ವಾಧಿಕಾರಿ ಧೋರಣೆಯಾಗಿದೆ, ವಿಧಾನಮಂಡಲದ ಘನತೆ ಹಾಗೂ ಅದರ ಸಾಂವಿಧಾನಿಕ ಶಕ್ತಿಯನ್ನು ಮಣ್ಣು ಪಾಲಾಗಿಸುವ ದಾರ್ಷ್ಟ್ಯತನ ಮೆರೆಯಲು ಕಾಂಗ್ರೆಸ್ ಹೊರಟಿದೆ ಎಂದು ಪೊಲೀಸರ ಕ್ರಮಕ್ಕೆ ಆಕ್ಷೇಪಿಸಿರುವ ವಿಜಯೇಂದ್ರ, ಮತ್ತೊಂದು ತುರ್ತು ಪರಿಸ್ಥಿತಿ ಹೇರಿಕೆಯ ಪರೋಕ್ಷ ಹವಣಿಕೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ “ಪ್ರಜಾಪ್ರಭುತ್ವ ಉಳಿಸಿ ಗೂಂಡಾ ಕಾಂಗ್ರೆಸ್ ತೊಲಗಿಸಿ” ಎಂಬ ಬೃಹತ್ ಜನಾ೦ದೋಲನ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ‘X’ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, ಶಾಸಕ ಸಿ.ಟಿ. ರವಿ ಅವರನ್ನು ಬೇಷರತ್ ಬಿಡುಗಡೆ ಮಾಡಿಸಿ, ಅವರ ಮೇಲೆ ದೌರ್ಜನ್ಯ ನಡೆಸಿದ ಕಾಂಗ್ರೆಸ್ ಗೂಂಡಾಗಳನ್ನು ಜೈಲಿಗೆ ಅಟ್ಟುವ ವರೆಗೂ ಬಿಜೆಪಿ ಹೋರಾಟ ನಿಲ್ಲದು ಎಂದು ಘೋಷಣೆ ಮಾಡಿದ್ದಾರೆ.
ಶಾಸಕ ಸಿ ಟಿ ರವಿಯವರ ಮೇಲೆ ಸುವರ್ಣ ಸೌಧದಲ್ಲಿ ಮಾರ್ಷಲ್ ಗಳ ಸುಮ್ಮುಖದಲ್ಲೇ ಹೊರಗಿನ ಗೂಂಡಾಗಳಿಂದ ನಡೆದಿರುವ ದೌರ್ಜನ್ಯ ಹಾಗೂ ಮಾರಣಾಂತಿಕ ಹಲ್ಲೆಯತ್ನದ ಕುರಿತು ಉಭಯ ಸದನಗಳ ಸ್ಪೀಕರ್ ಗಳು ತಮ್ಮ ನಿಲುವು ಪ್ರಕಟಿಸಿ ಕ್ರಮ ಕೈಗೊಳ್ಳಬೇಕು, ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.