ಮಂಗಳೂರು: ರಾಜ್ಯದಲ್ಲಿ ಮತ್ತೆ ಕೋಮು ಸಂಘರ್ಷ ವಾತಾವರಣ ಸೃಷ್ಟಿಯಾಗುವ ಭೀತಿ ಇದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಜನತೆಯಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್ ದೂರಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಸಮಯದಿಂದ ಅಭಿವೃದ್ಧಿ ವಿಷಯ ಬಗ್ಗೆ ಯಾವುದೇ ಚಕಾರ ಎತ್ತದೆ, ಸುಖಾಸಮ್ಮನ್ನೆ ಆರೋಪ ಮಾಡುತ್ತಿದ್ದಾರೆ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಅವರದ್ದೇ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಾಡಿದ ಎಡವಟ್ಟಿನಿಂದ ನಗರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಈ ಬಗ್ಗೆ ಮೊದಲು ಗಮನಹರಿಸಲಿ ಎಂದು ಪದ್ಮರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಾದ್ಯಂತ ಜನತೆ ಕೋಮುಸಾಮರಸ್ಯದಿಂದ ಬದುಕುತ್ತಿದ್ದಾರೆ. ಕಾಂಗ್ರೆಸ್‌ಗೂ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಇದೆ. ಬಿಜೆಪಿವರು ಭಾವನಾತ್ಮಕವಾಗಿ ಜನತೆಯನ್ನು ಮರುಳು ಮಾಡುವುದನ್ನು ಕೈಬಿಡಲಿ ಎಂದಿರುವ ಪದ್ಮರಾಜ್, ಭಾವನಾತ್ಮಕ ಮಾತುಗಳ ಮೂಲಕ ಜನತೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸುವುದೇ ಬಿಜೆಪಿಯವರಿಗೆ ಚಾಲಿಯಾಗಿದೆ. ಆದರೆ ಈ ಭಾರಿ ನಿಮ್ಮ ನಾಟಕ ನಡೆಯುವುದಿಲ್ಲ. ಕಾಂಗ್ರೆಸ್ ಎಂದಿಗೂ ಬಡವರ ಪರವಾಗಿದ್ದು, ದೇಶದಲ್ಲೇ ಮಾದರಿಯಾಗಿ ರೂಪಿಸಿ, ಅಭಿವೃದ್ಧಿಯಲ್ಲೂ ನಂಬರ್ ವನ್ ರಾಜ್ಯವನ್ನಾಗಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಶಾಸಕ ವೇದವ್ಯಾಸ ಕಾಮತ್‌ವರು ಅವರದೇ ಸರ್ಕಾರ ಅಧಿಕಾರದಲ್ಲಿದ್ದರೂ ಮಂಗಳೂರು ನಗರವನ್ನು ಅಭಿವೃದ್ಧಿ ಮಾಡುವಲ್ಲಿ ಎಡವಿದ್ದಾರೆ. ಕಳೆದ ಐದು ವರ್ಷವೂ ಕೇವಲ ಭಾವನಾತ್ಮಕ ವಿಷಯದ ಬಗ್ಗೆ ಮಾತನಾಡಿ ಜನತೆಯನ್ನು ಯಾಮಾರಿಸಿದ್ದಾರೆ. ನಗರದಾದ್ಯಂತ ನಡೆದ ಅವೈಜ್ಞಾನಿಕ ಕಾಮಗಾರಿಯಿಂದ ನಗರದಲ್ಲಿ ಕೃತಕ ನೆರೆ ಭೀತಿ ಸಾಧ್ಯತೆ ಇದೆ. ಈ ಬಗ್ಗೆ ಮೊದಲು ಗಮನಹರಿಸಿ ಕೆಲಸ ಮಾಡಲಿ ಎಂದು ಪದ್ಮರಾಜ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.