ಬೆಂಗಳೂರು: ದಾಖಲೆಯ 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿರುವುದು ಗಮನಾರ್ಹ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ಬಜೆಟ್ ಮಂಡನೆಯ ನಂತರ ಪತ್ರಿಕ್ರಿಯೆ ನೀಡಿರುವ ಸಚಿವರು, ಆರ್ಥಿಕ ತಜ್ಞರಾಗಿರುವ ಮುಖ್ಯಮಂತ್ರಿಗಳು, “ಸರ್ವೋದಯವಾಗಲಿ ಸರ್ವರಲಿ” ಎಂಬ ಕವಿವಾಣಿಯಂತೆ ಎಲ್ಲ ವರ್ಗಕ್ಕೂ ಎಲ್ಲ ಕ್ಷೇತ್ರಕ್ಕೂ ಕೊಡುಗೈ ದಾನಿಗಳಾಗಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು. ನಮ್ಮ ವೈದ್ಯಕೀಯ ಶಿಕ್ಷಣ ಇಲಾಖೆಗೆ ಕೂಡ ಭರಪೂರ ಕೊಡುಗೆಗಳನ್ನು ನೀಡಿದ ಮುಖ್ಯಮಂತ್ರಿಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಡಾ. ಪಾಟೀಲ್ ತಿಳಿಸಿದರು.
ಕಾರವಾರದಲ್ಲಿ 198 ಕೋಟಿ ರೂ. ವೆಚ್ಚದ 450 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ 10 ಕೋಟಿ ರೂ. ವೆಚ್ಚದ ಟ್ರಾಮಾ ಕೇರ್ ಕೇಂದ್ರ ಮತ್ತು ಮೈಸೂರು ಹಾಗೂ ತುಮಕೂರಿನಲ್ಲಿ 92 ಕೋಟಿ ರೂ. ವೆಚ್ಚದ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.
236 ಕೋಟಿ ರೂ. ವೆಚ್ಚದ ಹುಬ್ಬಳ್ಳಿಯ ಜಯದೇವ ಹೃದ್ರೋಗ ಪ್ರಾದೇಶಿಕ ಕೇಂದ್ರದ ಕಟ್ಟಡ ಲೋಕಾರ್ಪಣೆ, ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಅಜೀಂ ಪ್ರೇಮ್‌ಜೀ ಫೌಂಡೇಶನ್ ವತಿಯಿಂದ 1,000 ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಮತ್ತು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳಿಗೆ 620 ಕೋಟಿ ರೂ.ಗಳ ಅನುದಾನವನ್ನು ಮತ್ತು ಉಪಕರಣಗಳ ಖರೀದಿಗಾಗಿ 220 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡುವ ಮೂಲಕ ಎಲ್ಲರಿಗೆ ಸುಲಭ ಆರೋಗ್ಯ, ಸುಲಲಿತ ಆರೋಗ್ಯ ದೊರಕಿಸಿಕೊಡಬೇಕು ಎಂಬ ಸರ್ಕಾರದ ಆಶಯವನ್ನು ಸಾಕಾರಗೊಳಿಸಲಾಗಿದೆ ಎಂದರು.
ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆ ಮತ್ತು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐ.ವಿ.ಎಫ್ ಕೇಂದ್ರಗಳನ್ನು ಸ್ಥಾಪಿಸಲು ತಲಾ ಒಂದು ಕೋಟಿ ರೂ. ನೀಡಿರುವುದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಆರೋಗ್ಯ ಭಾಗ್ಯ ದೊರೆಯಲಿದೆ ಎಂದರು.
ಕೋಲಾರ, ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು
ವಿಜಯಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲು ಬಜೆಟ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ತೀರ್ಮಾನಿಸಿರುವುದು ವಿಶೇಷವಾಗಿದೆ ಎಂದರು.
ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ಎಲ್ಲರಿಗೂ ಹಿತವಾದ “ಸರ್ವಮಯ* ಬಜಟ್ ಎಂಬುದು ಘೋಷಣೆಗಳಿಂದಲೇ ಶ್ರುತಪಟ್ಟಿದೆ ಎಂದು ಡಾ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋಪಾಲಗೌಡರಿಗೆ ಗೌರವ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣಗೊಳಿಸಲು ನಿರ್ಧರಿಸಲಾಗಿದೆ. ಈ ಮೂಲಕ ನಮ್ಮ ಸರ್ಕಾರವು ಸಮಾಜವಾದಿ ಶಾಂತವೇರಿ ಗೋಪಾಲಗೌಡರಿಗೆ ವಿಶೇಷ ಗೌರವ ಸಲ್ಲಿಸಿದೆ ಎಂದು ಡಾ. ಪಾಟೀಲ್ ತಿಳಿಸಿದರು.
ಬೆಂಗಳೂರು ವೈದ್ಯಕೀಯ ಕಾಲೇಜಿನ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕಾಗಿ 10 ಕೋಟಿ ರೂ.ಗಳ ಅನುದಾನವನ್ನು ಒದಗಿಸಿರುವುದು ಸ್ವಾಗತಾರ್ಹ ಎಂದರು.






















































