ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ನಕಲಿ ಸಿಡಿಯ ಗುಮ್ಮಾ ಎದುರಾಗಿದೆಯಂತೆ. ಗೌರವ ಉಳಿಸಿಕೊಳ್ಳುವ ಉದ್ದೇಶದಿಂದ ಅವರು ನ್ಯಾಯಾಲಯದಿಂದ ಆದೆಶವೊಂದನ್ನು ತಂದಿದ್ದಾರೆ.
ಸಿಡಿಯಂತಹಾ ವಿವಾದ ಸೃಷ್ಟಿಸಿ ತಮ್ಮ ಘನತೆಗೆ ಚ್ಯುತಿ ತರುವ ಪಿತೂರಿ ನಡೆದಿರುವ ಬಗ್ಗೆ ಸುಳಿವರಿತ ಕೂಡಲೇ ನ್ಯಾಯಾಲಯದ ಮೆಟ್ಟಿಲೇರಿರುವ ಅವರು, ತಮ್ಮ ವಿರುದ್ದದ ಸಂಚಿನ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗದಂತೆ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಿಂದ ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ಡಿವಿಎಸ್ ಅವರು ನಿರ್ಬಂಧಕಾಜ್ಞೆ ಪಡೆದಿದ್ದಾರೆ.
ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲವು ಪತ್ರಿಕೆ, ಚಾನಲ್ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂಬ ಆತಂಕವನ್ನು ಅವರು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ. ಕೆಲವು ಹಳೆಯ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು, ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಕುರಿತು ನಕಲಿ ವಿಡಿಯೋ ಮಾಡಲಾಗಿತ್ತು. ಅದೇ ರೀತಿ ತಮ್ಮ ವಿರುದ್ದವೂ ಪಿತೂರಿ ನಡೆಯಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು, ಮಾಧ್ಯಮಗಳಲ್ಲಿ ಮಾನಹಾನಿಕರ ವರದಿ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ನನ್ನ ವಯಕ್ತಿಕ ತೇಜೋವಧೆಗೆ ಪ್ರಯತ್ನಸಿದ್ದರು.
ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು— Sadananda Gowda ( Modi Ka Parivar ) (@DVSadanandGowda) July 2, 2021
ಈ ಕುರಿತಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಸದಾನಂದಗೌಡರು, ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ತನ್ನ ವಯಕ್ತಿಕ ತೇಜೋವಧೆಗೆ ಪ್ರಯತ್ನಸಿದ್ದರು. ಮಾಧ್ಯಮ ಸ್ವಾತಂತ್ರ್ಯವನ್ನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ನಿರ್ಬಂಧ ಆದೇಶ ತರಬೇಕಾಗಿ ಬಂತು ಎಂದು ಸ್ಪಷ್ಟಪಡಿಸಿದ್ದಾರೆ.