ಮಂಗಳೂರು: ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ಸಮೀಕ್ಷೆ ನಡೆಸಿ ಸಂರಕ್ಷಣೆ ಮಾಡುವ ಚಿಂತನೆಯಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ಹಿಂದಿನ ಸರ್ಕಾರಗಳು ಹಳೆಯ ಪದ್ದತಿಯಲ್ಲಿ ಸಮೀಕ್ಷೆ ಮಾಡಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿಸಲಿದ್ದೇವೆ. ಇದರಿಂದ ನಿಖರವಾದ ಮಾಹಿತಿ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಇದನ್ನು ವೈಜ್ಞಾನಿಕ ಆಧಾರದ ಮೇಲೆ ಸರ್ವೆ ನಡೆಸಬೇಕು. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.
ಚಿಕ್ಕಬಳ್ಳಾಪುರ ಬಳಿ ನಡೆದ ಘಟನೆ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಜಿಲಿಟಿನ್ ಪೂರೈಕೆ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಇದಕ್ಕಾಗಿ ಹೊಸ ಕಾನೂನನ್ನು ಜಾರಿ ಮಾಡುವ ಚಿಂತನೆಯೂ ಇದೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದವರು ಮಾತ್ರ ಸ್ಪೋಟಕ ವಸ್ತುಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುವ ಕಾನೂನನ್ನು ಜಾರಿ ಮಾಡುವ ಆಲೋಚನೆಯಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಯಾರಾದರೂ ಅನಧಿಕೃತವಾಗಿ ಜಿಲಿಟಿನ್ ಕಡ್ಡಿಗಳನ್ನು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು.
ಕಲ್ಲು ಕ್ವಾರಿಗಳಲ್ಲಿ ಅನಧಿಕೃತವಾಗಿ ಜಿಲಿಟಿನ್ ಬಳಕೆ ಮಾಡದಂತೆ ಪತ್ತೆಹಚ್ಚಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದರು.
ಶಿವಮೊಗ್ಗ ಹುಣಸೋಡು ಬಳಿ ಕಲ್ಲು ಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿ ಸ್ಫೋಟಗೊಂಡ ನಂತರ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಜಿಲಿಟಿನ್ ಕಡ್ಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಬಹುದೆಂಬ ಭೀತಿಯಿಂದಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ವೇಳೆ ಸ್ಪೋಟವಾಗಿರಬಹುದು ಎಂದರು.