ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರನ್ನು ಗುರಿಯಾಗಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರು ಆರೋಪಿಸಿದರು. ಮುಖ್ಯಮಂತ್ರಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮತಿ ಇಂದಿರಾ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಪ್ರಭಾವಶಾಲಿ ಎನಿಸಿದ್ದ ಮುದ್ರಣ ಮಾಧ್ಯಮವನ್ನು ಗುರಿಯಾಗಿ ಇಟ್ಟುಕೊಂಡಿದ್ದರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇಡೀ ಪತ್ರಕರ್ತರನ್ನು ಜೈಲಿಗೆ ಅಟ್ಟಿದ ಕಳಂಕ ಕಾಂಗ್ರೆಸ್ ಮೇಲಿದೆ. ಇವತ್ತು ಅದೇ ಧಾಟಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಹೊರಟಿರುವುದು ಹೇಡಿತನದ ಪರಮಾವಧಿ ಎಂದು ಟೀಕಿಸಿದರು.
ಇದು ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಕಾಂಗ್ರೆಸ್‍ನ ಸಂಚು ಎಂದು ಆಕ್ಷೇಪಿಸಿದ ಅವರು, ಒಂದು ರೀತಿ ಬ್ಲ್ಯಾಕ್‍ಮೈಲ್ ನಡೆದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಅವರ ಉತ್ತಮ ಕಾರ್ಯಕ್ಕಾಗಿ ರಷ್ಯಾವೂ ಹೊಗಳಿದೆ. ಪಾಕಿಸ್ತಾನ, ಚೀನಾಗೆ ಸರಿಯಾದ ಬುದ್ಧಿ ಕಲಿಸಿ ವಿಶ್ವ ನಾಯಕರಾಗಿದ್ದಾರೆ. ಅಮೆರಿಕದ ಪ್ರಧಾನಿಯೂ ಹೊಗಳಿದ್ದಾರೆ. ಇಂಗ್ಲೆಂಡ್ ಪ್ರಧಾನಿಯೂ ಉತ್ತಮ ಬಾಂಧವ್ಯ ಹೊಂದುವುದಾಗಿ ತಿಳಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಮೋದಿಯವರ ಕಾರ್ಯಕ್ರಮಗಳು ದಿನನಿತ್ಯ ಹೆಚ್ಚಾಗಿ ಪ್ರಸಾರ ಆಗುತ್ತಿರುವ ಕೊರಗು ಕೂಡ ಇದಕ್ಕೆ ಕಾರಣ ಎಂದು ತಿಳಿಸಿದರು.
ಮಾಧ್ಯಮವನ್ನೂ ಒಡೆದ ಕಾಂಗ್ರೆಸ್- ಅಶೋಕ್
ಮುಸ್ಲಿಂ ಪತ್ರಕರ್ತರಿಗೆ ಮಾತ್ರ ಲ್ಯಾಪ್ ಟಾಪ್ ಗಿಫ್ಟ್ ಕೊಡಬೇಕೆಂದು ಸರಕಾರದ ಆದೇಶ ಹೊರಡಿಸಿದ್ದರು. ಕಾಂಗ್ರೆಸ್‍ನವರ ಕಣ್ಣಿಗೆ, ದಿವ್ಯದೃಷ್ಟಿಗೆ ಬೇರೆ ಪತ್ರಕರ್ತರು ಕಾಣಲಿಲ್ಲವೇ? ಲಿಂಗಾಯತ- ವೀರಶೈವರನ್ನು ಒಡೆಯಲು ಮುಂದಾಗಿದ್ದ ಸಿದ್ದರಾಮಯ್ಯರವರು ಪತ್ರಕರ್ತರಲ್ಲೂ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಎಂದು ಭೇದಭಾವ ತೋರಿಸುವ ಮೂಲಕ ಪತ್ರಕರ್ತರನ್ನು ದಾಳವಾಗಿ ಮಾಡಿದ್ದರು ಎಂದು ಅಶೋಕ್ ಅವರು ಟೀಕಿಸಿದರು.
ಸಿದ್ದರಾಮಯ್ಯರಿಗೆ ಒಡೆಯುವ ಅಂಟು ಬಂದಿದೆ. ಕಾಂಗ್ರೆಸ್‍ನವರು ಒಡೆದು ಆಳುವ ನೀತಿಯನ್ನು ಪತ್ರಕರ್ತರ ಮೇಲೆ ಪ್ರಯೋಗ ಮಾಡಿದ್ದರು. ಇದೊಂದು ಹೀನ ಕಾರ್ಯ ಎಂದು ಆಕ್ಷೇಪಿಸಿದರು. ಉರ್ದು ಪತ್ರಿಕೆಗೆ ಮಾತ್ರ 61 ಲಕ್ಷದ ಜಾಹೀರಾತು ಕೊಡಲು ಸೂಚಿಸಿದ್ದರು ಎಂದು ಆದೇಶಪತ್ರವನ್ನು ನೀಡಿದರು.
ಮಾಧ್ಯಮವನ್ನು ಒಡೆಯುವ ಪ್ರಯತ್ನ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿಗರಿಗೆ ರಕ್ತಗತವಾಗಿದೆ. ಐ ಫೋನ್ ಲಂಚ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಲಂಚ ಕೊಡುವ ಪ್ರವೃತ್ತಿ ಬಿಡುವಂತೆ ಆಗ ಕುಮಾರಸ್ವಾಮಿ ಅವರು ಸಲಹೆ ನೀಡಿದ್ದರು ಎಂದು ವಿವರ ನೀಡಿದರು.
ಕಾಂಗ್ರೆಸ್‍ನ 2 ಜಿ ಹಗರಣ, ಹೆಲಿಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣಗಳಿಂದ ಹಲವರು ಜೈಲಿನಲ್ಲಿದ್ದಾರೆ. ಉಳಿದವರು ಜಾಮೀನಿನಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ- ರಾಹುಲ್ ಗಾಂಧಿ ಅವರು ಕೂಡ ಹಗರಣದಲ್ಲಿ ಭಾಗಿಯಾಗಿ ಜಾಮೀನಿನಡಿ ಹೊರಗಿದ್ದಾರೆ. ಭ್ರಷ್ಟಾಚಾರ, ಕೋಮುವಾದ ಮತ್ತು ಗೂಂಡಾಗಿರಿಗೆ ಒಂದು ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ವಿವರಿಸಿದರು.
ಬೆಂಗಳೂರಿನ ಸ್ಟೀಲ್ ಬ್ರಿಡ್ಜ್‍ನಲ್ಲಿ 65 ಕೋಟಿ ಲೂಟಿ ಮಾಡಲು ಟೆಂಡರ್ ಮಾಡಿದ್ದರು. ಜನರ ಹೋರಾಟದ ಪರಿಣಾಮವಾಗಿ ರಾತ್ರೋರಾತ್ರಿ ಅದನ್ನು ವಾಪಸ್ ಪಡೆದರು. ಇವರು ಸತ್ಯ ಹರಿಶ್ಚಂದ್ರರಾಗಿದ್ದರೆ, ಭ್ರಷ್ಟಾಚಾರ ಇಲ್ಲದಿದ್ದರೆ ಆ ಯೋಜನೆಯನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಚಾತಕಪಕ್ಷಿಯಂತೆ ಹವಣಿಸುತ್ತಿದೆ. ಕರ್ನಾಟಕವನ್ನು ದೆಹಲಿಯ ನಾಯಕರಿಗೆ ಎಟಿಎಂ ಮಾಡಲು ಮತ್ತು ವೈಯಕ್ತಿಕವಾಗಿ ಜೇಬು ತುಂಬಿಸಲು ಇಲ್ಲಿ ಅಧಿಕಾರ ಪಡೆಯುವ ಹವಣಿಕೆ ಕಾಂಗ್ರೆಸ್ಸಿಗರದು. ಕರ್ನಾಟಕದ ಮೇಲೆ ಕಾಂಗ್ರೆಸ್ಸಿಗರ ವಕ್ರದೃಷ್ಟಿ ಬಿದ್ದಿದೆ. ಸಿಎಂ ಕಚೇರಿಯಿಂದ ಹಣ ಕೊಟ್ಟ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಟ್ಟಿದ್ದು ತನಿಖೆ ನಡೆದಿದೆ. ಸತ್ಯಾಸತ್ಯತೆ ಹೊರಕ್ಕೆ ಬರುವ ಮೊದಲೇ ಕಾಂಗ್ರೆಸ್ಸಿಗರು ನ್ಯಾಯಾಧೀಶರಾಗಿ ಪತ್ರಕರ್ತರ ವಿರುದ್ಧ ತೀರ್ಪು ನೀಡಿದ್ದಾರೆ ಎಂದರು.
























































