ಆಸ್ತಿಕ ಹೃದಯಗಳಿಗೆ ಆಪ್ತವಾದ, ಆಧ್ಯಾತ್ಮಿಕ ಮನಸ್ಸುಗಳಿಗೆ ಮುದ ನೀಡುವಂತೆ ಸಂಗೀತ ಲಹರಿಯನ್ನು ಪ್ರಸ್ತುತಪಡಿಸುತ್ತಿರುವ ಮಂಗಳೂರು ಮೂಲದ ದೇವಲೋಕ ಕ್ರಿಯೇಷನ್ಸ್ ಇದೀಗ ಮತ್ತೊಂದು ಭಕ್ತಿ ಗಾಯನ ಮೂಲಕ ಗಮನಸೆಳೆದಿದೆ. ಆದ್ಯಾತ್ಮ ಲೋಕದ ಮೆಚ್ಚುಗೆ ಗಳಿಸಿರುವ ‘ದೇವಲೋಕ ಕ್ರಿಯೇಷನ್ಸ್’ ವತಿಯಿಂದ ಅನಾವರಣವಾಗಿರುವ ಕೊರಗಜ್ಜ ಕುರಿತ ‘ಮಾಯೊದ ಮಾಯ್ಕಾರೆ’ ಎಂಬ ಹಾಡು ಸಕತ್ತಾಗಿ ವೈರಲ್ ಆಗುತ್ತಿದೆ.
‘ಕೊರಗಜ್ಜ’ ತುಳುನಾಡಿನ ಜನರ ಆರಾಧ್ಯ ದೈವ. ನಂಬಿದವರಿಗೆ ಇಂಬು ನೀಡುವ ಈ ದೈವ ಬಗ್ಗೆ ಕರಾವಳಿ ಜನರಷ್ಟೇ ಅಲ್ಲ, ಇದೀಗ ದೇಶವಿದೇಶಗಳ ಆಸ್ತಿಕರೂ ನಂಬಿ ಆರಾಧಿಸುತ್ತಿದ್ದಾರೆ. ಈ ಕೊರಗಜ್ಜನ ಬಗ್ಗೆ ದೇವಿಪ್ರಸಾದ್ ಎಂ. ದೇವಂದಬೆಟ್ಟು ಅವರ ಸಾಹಿತ್ಯದಲ್ಲಿ ಮೂಡಿಬಂದ ಭಕ್ತಿಗೀತೆಯು ಆಸ್ತಿಕರ ಮನಗೆದ್ದಿದೆ. ಇದು ದೇವಲೋಕ ಕ್ರಿಯೇಷನ್ಸ್ ಬಳಗದ 12ನೇ ಗೀತೆ (9ನೇ ಭಕ್ತಿಗೀತೆ). ‘ಮಾಯೊದ ಮಾಯ್ಕಾರೆ’ ಎಂಬ ಹೆಸರಿನ ಈ ಭಕ್ತಿಗೀತೆಯನ್ನು ದಕ್ಷಿಣಕನ್ನಡ ಜಿಲ್ಲೆ ಬೆಂಜನಪದವು ಶ್ರೀ ಕೊರಗ ತನಿಯಜ್ಜನ ಕಟ್ಟೆಯಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು.
ಕೊರಗಜ್ಜ ಸ್ವಾಮಿ ಕುರಿತಾಗಿ ರಚಿಸಲಾದ ಈ ಭಕ್ತಿಗೀತೆಯಲ್ಲಿ ಅಜ್ಜನ ಕಾರ್ಣಿಕ ಮತ್ತು ಗುಣಗಾನ ತುಂಬಾ ಸೊಗಸಾಗಿ ಮೂಡಿಬಂದಿದೆ. ಖ್ಯಾತ ಗಾಯಕ ಜ್ಯೂ. ಎಸ್.ಪಿ.ಬಿ ಎಂದೇ ಹೆಸರಾಗಿರುವ ಪ್ರವೀಣ್ ಎಂ.ಎಸ್.ಮಂಗಳೂರು ಮತ್ತು ಗಾಯಕಿ ಸೌಮ್ಯಾ ಪುತ್ತೂರು ಅವರು ಹಾಡಿ, ಅಭಿನಯಿಸಿ, ಗೀತೆಗೆ ಆಕರ್ಷಣೆ ತುಂಬಿದ್ದಾರೆ.
ನಿರ್ದೇಶನ ಮತ್ತು ಚಿತ್ರೀಕರಣದ ಕಾರ್ಯವನ್ನು ದೇವಿಪ್ರಸಾದ್ ಎಂ. ದೇವಂದಬೆಟ್ಟು ಅವರೇ ನಿರ್ವಹಿಸಿದ್ದು, ಅವಿನಾಶ್ ಪೂಜಾರಿಯವರ ಸಂಕಲನ ಪ್ರಶಂಸನೀಯ. ಪ್ರತೀಕ್ಷಾ ಬೆದ್ರಾಡಿ, ತೃಶಾ ಬೆದ್ರಾಡಿ, ನಿಶಾ ಬೆದ್ರಾಡಿ, ಯಶ್ವಿನಿ ಜಾರಂದಗುಡ್ಡೆ, ಚಾರ್ವಿ ಜಾರಂದಗುಡ್ಡೆ ಅಭಿನಯಿಸಿದ್ದು, ಕು. ಪ್ರಶ್ವಿ, ಕು. ದಿಯಾ ಮತ್ತು ಕು. ಚಾರ್ವಿ ಬೆದ್ರಾಡಿ ಅವರ ಮನಮೋಹಕ ನೃತ್ಯ ಗಮನಸೆಳೆದಿದೆ. ಜಯಪ್ರಕಾಶ್ ತುಂಬೆ ಮತ್ತು ಕುಟುಂಬ ಈ ಭಕ್ತಿಗೀತೆ ನಿರ್ಮಾಣ ಮಾಡಿದೆ.
ವಿಜಿಸಿ ಧ್ಯೇಯಗೀತೆ, ತುಡರ್ ಉಚ್ಚಯ, ಪಿಲಿಪೇರ್, ಪರಿಮಾಳ ಪುರ್ಪ, ನರಜನ್ಮ ಪಾವನಾಂಡ್, ಶಂಕರಾ ಕೇನಂದೆ ಎನ್ನ ಸ್ವರ, ಪುರಲ್ದ ಸಿರಿಯೇ, ಅಪ್ಪೆ ಭ್ರಾಮರಿಯೇ, ಹೇ ಮಾರುತಿ ಭಕ್ತಿಗೀತೆಗಳು ದೇವಿಪ್ರಸಾದ್ ಎಂ.ದೇವಂದಬೆಟ್ಟು ಅವರ ಸಾಹಿತ್ಯದಲ್ಲಿ ಮೂಡಿಬಂದಿದ್ದವು.